Sidlaghatta : ಇ-ಹರಾಜು, ಇ-ತೂಕ ಮತ್ತು ಇ-ವಹಿವಾಟು ವ್ಯವಸ್ಥೆಯಿಂದಾಗಿ ರೇಷ್ಮೆಗೂಡು ಬೆಳೆಗಾರ ರೈತರು ಹಾಗೂ ರೇಷ್ಮೆನೂಲು ಬಿಚ್ಚಾಣಿಕೆದಾರರು ಇಬ್ಬರಿಗೂ ಅನುಕೂಲ ಆಗಿದೆ, ಪಾರದರ್ಶಕ ವಹಿವಾಟು ನಡೆಯಲಿದೆ ಎಂದು ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿದ್ದ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಅಂತಿಮ ವರ್ಷದ ಕೃಷಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿನ ಇ ಹರಾಜು ವ್ಯವಸ್ಥೆ ಕುರಿತು ಮಾಹಿತಿ ನೀಡಿ ಮಾತನಾಡಿದರು.
ರೇಷ್ಮೆಗೂಡು ಮಾರುಕಟ್ಟೆಗೆ ಬರುವ ಪ್ರತಿ ರೈತರಿಗೂ ತಮ್ಮ ರೇಷ್ಮೆ ಗೂಡನ್ನು ಹಾಕಿಕೊಳ್ಳಲು ಜಾಲರಿಗಳನ್ನು ನೀಡಲಾಗುತ್ತದೆ. ಪ್ರತಿ ಲಾಟಿಗೂ ಸರಣಿಯಾಗಿ ಒಂದು ಸಂಖ್ಯೆ ನೀಡಲಾಗುತ್ತದೆ. ರೀಲರ್‌ಗಳು ಮಾರುಕಟ್ಟೆಯ ಎಲ್ಲಾ ರೇಷ್ಮೆ ಗೂಡನ್ನು ಪರಿಶೀಲಿಸಿ ತಮಗೆ ಬೇಕಿರುವ ಗೂಡಿನ ಲಾಟಿಗೆ ತಮ್ಮ ಮೊಬೈಲ್ ನಲ್ಲಿ ನಿಗದಿತ ಆಪ್ ನಲ್ಲಿ ಬೆಲೆ ನಮೂದಿಸಿ ಬಿಡ್ ನೀಡುತ್ತಾರೆ.
ರೈತರಿಗೆ ಆ ಬೆಲೆ ಒಪ್ಪಿಗೆ ಆದಲ್ಲಿ ಹರಾಜಿನ ಬಿಡ್ ಒಪ್ಪಿ ಸಹಿ ಮಾಡುತ್ತಾರೆ. ಬೆಲೆ ಸಮಾಧಾನವಾಗದಿದ್ದಲ್ಲಿ ಹರಾಜು ರದ್ದು ಪಡಿಸಿ ಮತ್ತೊಂದು ಸುತ್ತಿನ ಹರಾಜಿಗೆ ಕಾಯುತ್ತಾರೆ. ಪ್ರತಿ ದಿನವೂ ಎರಡು ಭಾರಿ ಇ ಹರಾಜು ನಡೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಹರಾಜಿನ ನಂತರ ಎಲೆಕ್ಟ್ರಾನಿಕ್ ಯಂತ್ರಗಳಲ್ಲಿ ರೇಷ್ಮೆಗೂಡಿನ ನಿಖರ ತೂಕ ಹಾಕಲಾಗುತ್ತದೆ. ಹರಾಜಿಗೂ ಮೊದಲೆ ರೀಲರುಗಳ ಖಾತೆಯಲ್ಲಿ ಅಗತ್ಯ ಹಣ ಇರುವುದನ್ನು ಖಾತ್ರಿಪಡಿಸಿಕೊಂಡ ನಂತರವೇ ಹರಾಜಿನಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿರುತ್ತದೆ ಎಂದರು.
ರೇಷ್ಮೆಗೂಡಿನ ತೂಕ ಹಾಕಿದ ನಂತರ ರೈತ ಹಾಗೂ ರೀಲರುಗಳಿಂದ ಸರಕಾರಕ್ಕೆ ನಿಗಯಾದ ಕಮೀಷನ್ ಹೊರತುಪಡಿಸಿ ಉಳಿದ ಹಣ ರೈತನ ಖಾತೆಗೆ ನೇರವಾಗಿ 24 ಗಂಟೆಯೊಳಗೆ ಜಮೆ ಆಗುತ್ತದೆ ಎಂದು ವಿವರಿಸಿದರು.
ಇದರಿಂದ ಮದ್ಯವರ್ತಿಗಳ ಹಾವಳಿ ಇರುವುದಿಲ್ಲ, ರೇಷ್ಮೆಗೂಡಿನ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ದೊರೆತರೆ ರೀಲರುಗಳಿಗೂ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನೀಡಿದಂತಾಗುತ್ತದೆ ಎಂದು ಇ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ರೇಷ್ಮೆಗೂಡು ಮಾರುಕಟ್ಟೆ ರೇಷ್ಮೆ ಉಪನಿರ್ದೇಶಕ ಮಹದೇವಯ್ಯ, ರೇಷ್ಮೆ ಸಹಾಯಕ ನಿರ್ದೇಶಕ ಕೆ. ತಿಮ್ಮರಾಜು, ಜಿಕೆವಿಕೆ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತ, ವಿದ್ಯಾರ್ಥಿಗಳು ಹಾಜರಿದ್ದರು.