Sidlaghatta : ಲಕ್ಷಾಂತರ ರೂಪಾಯಿಗಳು ವ್ಯಾಪಾರ ವಹಿವಾಟು ನಡೆಯುವ ಹಾಗೂ ನೂರಾರು ಮಂದಿ ಆಗಮಿಸುವ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಜನರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ತಿಳಿಸಿದರು.
ಶಿಡ್ಲಘಟ್ಟ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ರೈತರು ಮತ್ತು ರೀಲರುಗಳಿಗಾಗಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಬಗ್ಗೆ ಹಾಗೂ ಅದರ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ವಿವರಿಸಿದರು. ರೈತರು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿಯೇ ಗೂಡನ್ನು ಮಾರುವುದರಿಂದ ಕಾನೂನು ಬೆಂಬಲವಾಗಿರುತ್ತದೆ. ಜೊತೆಗೆ ವಂಚನೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಸಬ್ ಇನ್ಸ್ ಪೆಕ್ಟರ್ ವೇಣುಗೋಪಾಲ್, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಮಹದೇವಯ್ಯ, ಸಹಾಯಕ ನಿರ್ದೇಶಕ ತಿಮ್ಮರಾಜು, ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್, ರೇಷ್ಮೆ ನೂಲು ಉತ್ಪಾದಕರ ಸಂಘದ ಅಧ್ಯಕ್ಷ ಫರೂಕ್ ಪಾಷ, ಜಿ.ರೆಹಮಾನ್, ಮುರ್ತುಜ, ಮುನಿಕೃಷ್ಣಪ್ಪ ಹಾಜರಿದ್ದರು.