ಶಿಡ್ಲಘಟ್ಟ ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತುರ್ತು ಸಭೆಯು ಆಡಳಿತಾರೂಢ ಜೆಡಿಎಸ್ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಮತ್ತಿತರೆ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮುಕಿ, ಪರಸ್ಪರ ನಿಂದನೆ ನೂಕಾಟ ತಳ್ಳಾಟಕ್ಕೆ ಸಾಕ್ಷಿಯಾಯ್ತು.
ಕೊನೆಗೆ ಸಭೆಯನ್ನು ಬಹಿಷ್ಕರಿಸಿ ಕಾಂಗ್ರೆಸ್ ಹಾಗೂ ಇತರೆ ಪಕ್ಷದ 19 ಸದಸ್ಯರು ಸಭೆಯಿಂದ ಹೊರ ನಡೆದರು. ಸಭೆಗೆ ಬಾರದೆ ಅಧ್ಯಕ್ಷರ ಕೊಠಡಿಯಲ್ಲಿದ್ದ ಕಾಂಗ್ರೆಸ್ ಸದಸ್ಯ ಜಭೀವುಲ್ಲಾ ಅವರನ್ನು ಸಭೆಯಿಂದ ಹೊರಗೆ ಹೋದ ಕಾಂಗ್ರೆಸ್ಸಿಗರು ಕರೆದೊಯ್ಯಲು ಮುಂದಾದಾಗ ತಮ್ಮೊಂದಿಗೆ ಉಳಿಸಿಕೊಳ್ಳಲು ಮುಂದಾದ ಜೆಡಿಎಸ್ ಸದಸ್ಯರ ನಡುವೆ ಪರಸ್ಪರ ನೂಕಾಟ ತಳ್ಳಾಟ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಅಷ್ಟರಲ್ಲಿ ಸಾರ್ವಜನಿಕರೂ ಸಹ ನಗರಸಭೆ ಕಚೇರಿ ಒಳಗೆ ಆಗಮಿಸಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು. ಕೊನೆಗೂ ಜಭೀವುಲ್ಲಾ ಜೆಡಿಎಸ್ ಸದಸ್ಯರ ಜತೆ ಹೊರ ನಡೆಯುವ ಮೂಲಕ ಹೈಡ್ರಾಮಾಗೆ ತೆರೆಬಿತ್ತು.
ನಡೆದಿದ್ದೇನು:
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10.30ಕ್ಕೆ ತುರ್ತು ಸಭೆ ಆರಂಭವಾಗುತ್ತಿದ್ದಂತೆ ಉಪಾಧ್ಯಕ್ಷ ಅಪ್ಸರ್‍ಪಾಷ ಅವರು, ತುರ್ತು ಸಭೆಯನ್ನು ಕರೆಯುವ ಉದ್ದೇಶವಾದರೂ ಏನು ? ತುರ್ತು ಸಭೆ ಕರೆಯುವಂತ ಪರಿಸ್ಥಿತಿ ಏನಿತ್ತು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ಆರ್.ಶ್ರೀಕಾಂತ್ ಅವರು, ಕೊರೊನಾ ಸೋಂಕು ಮಿತಿ ಮೀರುತ್ತಿದೆ. ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಉತ್ತರಿಸಿದರು.
ಇದಕ್ಕೆ ಆಕ್ಷೇಪಿಸಿದ ಲಕ್ಷ್ಮಣ್, ಕೊರೊನಾ ಮಿತಿ ಮೀರಿದಾಗ ನೀವು ಸಭೆ ಕರೆಯಲಿಲ್ಲ. ಕುಡಿಯುವ ನೀರು, ಬೀದಿ ದೀಪ ಇಲ್ಲದಾಗ ಸಭೆ ಕರೆಯಲಿಲ್ಲ. ನಾನಾ ಯೋಜನೆಗಳ ಹಣವನ್ನು ತಿಂದು ತೇಗಿದ್ದೀರಿ, ಅಭಿವೃದ್ದಿಯನ್ನು ಮಾಡಿಲ್ಲ. ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇದೀಗ ಕೊರೊನಾ ನೆಪವೊಡ್ಡಿ ಸಭೆ ಕರೆದಿದ್ದೀರಾ, ನಾವು ಕೈಯ್ಯಿಂದ ಹಣ ಹಾಕಿ ಬೋರ್‍ವೆಲ್ ಹಾಕಿದ್ದೇವೆ. ಬೀದಿ ದೀಪ ಅಳವಡಿಸಿದ್ದೀವಿ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಆಕ್ಷೇಪವ್ಯಕ್ತಪಡಿಸಿದ ಅಧ್ಯಕ್ಷೆ ಸುಮಿತ್ರರಮೇಶ್ ಅವರು, ಇದೀಗ ಸಭೆ ಕರೆದಿರುವುದು ಕೊರೊನಾ ನಿಯಂತ್ರಣದ ಬಗ್ಗೆ ಆ ವಿಷಯದ ಬಗ್ಗೆ ಮಾತ್ರ ಮಾತನಾಡಿ ಬೇರೆಲ್ಲಾ ವಿಷಯಗಳು ಬೇಡ, ನೀವು ಸಭೆಯಲ್ಲಿ ಗಲಾಟೆ ಮಾಡಬೇಕೆಂದೆ ಬಂದಂತೆ ಕಾಣುತ್ತಿದೆ ಎಂದರು,
ಆಗ ಲಕ್ಷ್ಮಣ್ ಸೇರಿದಂತೆ ಕಾಂಗ್ರೆಸ್‍ನ ಮಂಜುನಾಥ್, ಕೃಷ್ಣಮೂರ್ತಿ ಇನ್ನಿತರೆ ಅನೇಕ ಸದಸ್ಯರು ಅಧ್ಯಕ್ಷೆಯ ವಿರುದ್ದ ತಿರುಗಿಬಿದ್ದರು. ನಾವು ಪೌರಾಯುಕ್ತರನ್ನು ಪ್ರಶ್ನಿಸುತ್ತಿದ್ದೇವೆ ನಿಮ್ಮನ್ನು ಮಾತನಾಡಿದಾಗ ನೀವು ಮಾತನಾಡಿ ಎಂದು ಎಲ್ಲರೂ ಅಧ್ಯಕ್ಷೆಯ ವಿರುದ್ದ ಮುಗಿಬಿದ್ದರು.
ಜತೆಗೆ ಬಿಜೆಪಿ ಸದಸ್ಯ ಮಿಲ್ಟ್ರಿರಘು ಅವರು, ಈ ಹಿಂದೆ ಮಾದ್ಯಮಗಳೊಂದಿಗೆ ಮಾತನಾಡುವಾಗ ಕಾಂಗ್ರೆಸ್‍ನ ಎಲ್ಲ ಸದಸ್ಯರು ಕ್ರಿಮಿನಲ್‍ಗಳು ಎಂದು ಹೇಳಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯೆ ಚೈತ್ರ ಮನೋಹರ್ ಅವರು, ನಾವು ಕ್ರಿಮಿನಲ್‍ಗಳು ಎಂಬುದನ್ನು ಸಾಭೀತುಪಡಿಸಬೇಕೆಂದು ರಘು ಅವರಿಗೆ ಸವಾಲು ಹಾಕಿದರು.
ಸಭೆಯಲ್ಲಿ ಪರಸ್ಪರ ಮಾತಿನ ಚಕಮುಕಿ ನಡೆಯಿತು. ನಂತರ ಕಾಂಗ್ರೆಸ್, ಬಿಎಸ್ಪಿ, ಬಿಜೆಪಿ ಸೇರಿದಂತೆ 19 ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಒಟ್ಟು 31 ಮಂದಿ ಸದಸ್ಯರ ಪೈಕಿ 30 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದು ಕಾಂಗ್ರೆಸ್‍ನ ಜಭೀವುಲ್ಲಾ ಸಭೆಗೆ ಬಾರದೆ ಅಧ್ಯಕ್ಷರ ಕೊಠಡಿಯಲ್ಲಿ ಅಧ್ಯಕ್ಷೆಯ ಪತಿಯೊಂದಿಗೆ ಇದ್ದರು. ಸಭೆಯಿಂದ ಹೊರಗೆ ಹೋಗುತ್ತಿದ್ದ ಕಾಂಗ್ರೆಸ್ ಹಾಗೂ ಇತರೆ ಸದಸ್ಯರು ಜಭೀವುಲ್ಲಾನನ್ನು ತಮ್ಮೊಂದಿಗೆ ಹೊರಗೆ ಕರೆದೊಯ್ಯಲು ಮುಂದಾದರು. ಆದರೆ ಜಭೀವುಲ್ಲಾ ನಮ್ಮೊಂದಿಗೆ ಬಂದಿದ್ದು ನಾವು ನಿಮ್ಮೊಂದಿಗೆ ಕಳುಹಿಸುವುದಿಲ್ಲ ಎಂದು ಅಧ್ಯಕ್ಷೆಯ ಪತಿ ರಮೇಶ್ ಸೇರಿದಂತೆ ಜೆಡಿಎಸ್‍ನ ಸದಸ್ಯರು ಜಭೀವುಲ್ಲಾನನ್ನು ಸುತ್ತುವರೆದರು. ಈ ವೇಳೆ ಜಭೀವುಲ್ಲಾನನ್ನು ಕರೆದೊಯ್ಯಲು ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ ತಳ್ಳಾಟ ನಡೆಯಿತು. ಅಷ್ಟರಲ್ಲಿ ಸಾರ್ವಜನಿಕರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನಗರಸಭೆ ಕಚೇರಿ ಒಳಗೆ ಜಮಾಯಿಸಿದರು. ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು. ಕೊನೆಗೂ ಜಭೀವುಲ್ಲಾ ಜೆಡಿಎಸ್‍ನ ಸದಸ್ಯರೊಂದಿಗೆ ಹೊರ ನಡೆದು ನಾಲ್ಕು ಗಂಟೆಗಳ ಕಾಲ ನಡೆದ ಹೈಡ್ರಾಮಾಗೆ ತೆರೆ ಎಳೆದರು.
ಕಾಂಗ್ರೆಸ್ ಹಾಗೂ ಇತರೆ ಪಕ್ಷದ 19 ಸದಸ್ಯರ ಬಹಿಷ್ಕಾರದ ನಡುವೆಯೂ ಸಭೆಗೆ ಅಗತ್ಯವಿದ್ದ 11 ಮಂದಿ ಸದಸ್ಯರು ಹಾಜರಿದ್ದ ಕಾರಣ ಅಧ್ಯಕ್ಷೆ ಸುಮಿತ್ರರಮೇಶ್ ಅಧ್ಯಕ್ಷತೆಯಲ್ಲಿ ಸಭೆಯನ್ನು ಮುಂದುವರೆಸಲಾಯಿತು. ಕೊರೊನಾ ನಿಯಂತ್ರಣ ಸೇರಿದಂತೆ, ಬಾಡಿಗೆ ಕರಾರು ಅವಧಿ ಮುಗಿದ ನಗರಸಭೆ ಅಂಗಡಿಗಳ ಹರಾಜು ಮಾಡುವುದು ಸೇರಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.