Sidlaghatta : ನಗರ ಸ್ವಚ್ಛವಾಗಿದ್ದಲ್ಲಿ, ಜನರು ಆರೋಗ್ಯವಂತರಾಗಿ ಇರಲು ಸಾಧ್ಯ. ಅದಕ್ಕಾಗಿ ಶಿಡ್ಲಘಟ್ಟ ನಗರದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದ್ದು ನಗರದ ಎಲ್ಲ 31 ವಾರ್ಡುಗಳಲ್ಲೂ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ನಗರದ ಚಿಕ್ಕಬಳ್ಳಾಪುರ ಮಾರ್ಗದ ಬಳಿ ಇರುವ ಮುಖ್ಯದ್ವಾರದ ಸ್ವಾಗತ ಕಮಾನು ಬಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ಅಧಿಕಾರದಲ್ಲಿ ಇರುವಷ್ಟು ದಿನವೂ ಶಿಕ್ಷಣ, ಆರೋಗ್ಯ, ಅಭಿವೃದ್ದಿಗೆ ಆದ್ಯತೆ ನೀಡಲಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿನ ಎಲ್ಲ ವಾರ್ಡುಗಳಲ್ಲೂ ಸ್ವಚ್ಚತಾ ಕಾರ್ಯ ಆಗಬೇಕಿದೆ. ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆ, ಅನುದಾನದ ಕೊರತೆ ಮುಂತಾದ ಕಾರಣಗಳಿಂದ ನಗರದಲ್ಲಿ ಸ್ವಚ್ಛತೆ ಇಲ್ಲದಾಗಿದೆ. ಆದರೆ ನಾನು ಕೊಟ್ಟ ಮಾತಿನಂತೆ ನಗರದಲ್ಲಿ ಏಕ ಕಾಲಕ್ಕೆ ಎಲ್ಲ ವಾರ್ಡುಗಳಲ್ಲೂ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕೊರತೆಯಾಗುವ ಅನುದಾನ, ಕಾರ್ಮಿಕರನ್ನು ನಾನು ಒದಗಿಸುತ್ತೇನೆ ಎಂದರು.
72 ಮಂದಿ ಪೌರ ಕಾರ್ಮಿಕರ ಜತೆಗೆ ಇನ್ನಷ್ಟು ಮಂದಿ ಕೂಲಿ ಕಾರ್ಮಿಕರನ್ನು ಹಾಗೂ ಜೆಸಿಬಿ, ಟ್ರ್ಯಾಕ್ಟರ್‌ಗಳನ್ನು ನಾನು ಒದಗಿಸಿಕೊಟ್ಟಿದ್ದು ಎಲ್ಲ 31 ವಾರ್ಡುಗಳಲ್ಲಿ ಸಮರೋಪಾದಿಯಲ್ಲಿ ಸ್ವಚ್ಚತಾ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಆಯಾ ವಾರ್ಡುಗಳ ನಗರಸಭೆ ಸದಸ್ಯರ ಸಲಹೆ ಮಾರ್ಗದರ್ಶನ ಪಡೆದು ಸ್ವಚ್ಛತಾ ಕಾರ್ಯ ನಡೆಸುವಂತೆ ಸೂಚಿಸಿದ್ದು, ಏಕಕಾಲದಲ್ಲಿ ಮತ್ತು ನಿರಂತರವಾಗಿ ಸ್ವಚ್ಛತಾ ಕಾರ್ಯ ಸಾಗಲಿದೆ. ಇದಕ್ಕೆ ಎಲ್ಲ ನಾಗರೀಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಪೌರಾಯುಕ್ತ ಆರ್.ಶ್ರೀಕಾಂತ್ ಮಾತನಾಡಿ, ಕಳೆದ ವಾರ ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಸ್ವಚ್ಛತೆ ಬಗ್ಗೆ ಬಹಳಷ್ಟು ದೂರುಗಳು ಬಂದ ಕಾರಣ ಸ್ವಚ್ಛತೆ ಕಾರ್ಯ ನಡೆಸುವಂತೆ ಶಾಸಕರು ಸೂಚಿಸಿದ್ದರು.
ಆದರೆ ಪೌರ ಕಾರ್ಮಿಕರ ಹಾಗೂ ಅನುದಾನದ ಕೊರತೆ ಇದೆ ಎಂದು ಹೇಳಿದ್ದಕ್ಕೆ ಕೊರತೆಯಾಗುವ ಅನುದಾನ, ಕೂಲಿ ಕಾರ್ಮಿಕರನ್ನು ಸ್ವಂತ ಹಣದಲ್ಲಿ ಒದಗಿಸುವುದಾಗಿ ಹೇಳಿದ್ದ ಶಾಸಕರು, ಕೊಟ್ಟ ಮಾತಿನಂತೆ ಇದೀಗ ಎಲ್ಲವನ್ನೂ ಒದಗಿಸಿ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿದ್ದು ನಾಗರಿಕರ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.
ನಗರದಲ್ಲಿನ ತ್ಯಾಜ್ಯವನ್ನೆಲ್ಲಾ ಹೊರಸಾಗಿಸಿದ ಮೇಲೆ, ಮುಂದಿನ ದಿನಗಳಲ್ಲಿ ನಿತ್ಯದ ಸ್ವಚ್ಛತಾ ಕಾರ್ಯ ಸುಲಭವಾಗಲಿದೆ, ನಾಗರೀಕರ ಆರೋಗ್ಯ, ನಗರದ ಸ್ವಚ್ಚತೆ ಸೌಂದರ್ಯ ಕಾಪಾಡಿಕೊಳ್ಳಲು ನೆರವಾಗಲಿದೆ ಎಂದು ವಿವರಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಪೌರಾಯುಕ್ತ ಶ್ರೀಕಾಂತ್, ಆರೋಗ್ಯ ನಿರೀಕ್ಷಕ ಮುರಳಿ, ನಗರಸಭೆ ಸದಸ್ಯರಾದ ಅನಿಲ್‌ಕುಮಾರ್, ರಾಘವೇಂದ್ರ, ನಂದು, ಮನೋಹರ್, ಮುಖಂಡರಾದ ತಾದೂರು ರಘು, ಆರ್.ಎ.ಉಮೇಶ್ ಹಾಜರಿದ್ದರು.