Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ನಗರಗಳಿಂದ ಆಗಮಿಸಿದ್ದ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತಿಭಾವ ವ್ಯಕ್ತಪಡಿಸಿದರು.
ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಸುಂದರವಾಗಿ ಅಲಂಕರಿಸಿದ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ನಂತರ ಅದ್ಧೂರಿಯಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳು ಈಡೇರಲೆಂದು ಪ್ರಾರ್ಥಿಸಿದರು. ಈ ಸಂದರ್ಭ ವಿವಿಧ ಕಲಾತಂಡಗಳ ಸಾಂಸ್ಕೃತಿಕ ಪ್ರದರ್ಶನ, ವಿವಿಧ ಅಂಗಡಿಗಳ ಸಾಲು ಹಾಗೂ ಉತ್ಸವದ ಮೆರಗು ಹೆಚ್ಚಿಸಿದ ಹಲವಾರು ವಿಶೇಷ ಅಲಂಕಾರಗಳು ಭಕ್ತರನ್ನು ಆಕರ್ಷಿಸಿದವು.
ಶಾಸಕ ಬಿ.ಎನ್. ರವಿಕುಮಾರ್ ಹಾಗೂ ತಹಶೀಲ್ದಾರ್ ಬಿ.ಎನ್. ಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ದೇಗುಲದಲ್ಲಿ ನಾನಾ ಪೂಜಾ ಕಾರ್ಯಗಳು ನಡೆಯಿದ್ದು, ಭಕ್ತರಿಗೆ ಬತ್ತಾಸು, ಸಿಹಿ-ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸುಗಳ ಜೊತೆಗೆ ಮಕ್ಕಳಿಗಾಗಿ ಆಟಿಕೆ ಅಂಗಡಿಗಳು, ಬಳೆಗಾರರ ಮಳಿಗೆಗಳು ಉತ್ಸವದ ಸಂಭ್ರಮ ಹೆಚ್ಚಿಸಿದವು.
ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರುಬೇಳೆ ವಿತರಿಸಿ, ಉತ್ಸವದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ದೇವರ ಪೂಜೆಯಲ್ಲಿ ಪಾಲ್ಗೊಂಡರು.