
Palicherlu, Sidlaghatta : ಪಲಿಚೇರ್ಲು-ಕನ್ನಪ್ಪನಹಳ್ಳಿ ಬಳಿಯ ಗೋಮಾಳದಲ್ಲಿ ಸೋಮವಾರ ಮಧ್ಯಾಹ್ನ ಹಾಗೂ ಅದೇ ದಿನ ಸಂಜೆ ರಾಚನಹಳ್ಳಿ ಬಳಿ ಕಾಣಿಸಿಕೊಂಡಿದ್ದ ಚಿರತೆ, ಬುಧವಾರ ದೊಗರನಾಯಕನಹಳ್ಳಿ-ವಾರಹುಣಸೇನಹಳ್ಳಿ ನಡುವಿನ ಮಣ್ಣಿನ ರಸ್ತೆಯಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ಘಟನೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭೀತಿಯನ್ನು ಉಂಟುಮಾಡಿದೆ.
ಚಿರತೆ ಕಾಣಿಸಿಕೊಂಡಿರುವ ಸುದ್ದಿ ಗ್ರಾಮಗಳಲ್ಲಿ ಭಯವನ್ನು ಬೀರಿದ್ದು, ಜನರು ಮನೆಯ ಹೊರಗೆ ಬರಲು ಸಹ ಹೆದರುತ್ತಿದ್ದಾರೆ. ತಮ್ಮ ಹೊಲ, ಗದ್ದೆ, ತೋಟಗಳಿಗೆ ಹೋಗುವ ವಿಚಾರದಲ್ಲಿ ತೀವ್ರ ಆತಂಕದಲ್ಲಿದ್ದಾರೆ.
ಮಂಗಳವಾರ ಚಿರತೆಯನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಹೇಳಿಕೆಗಳ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಮೇಕೆಯ ಮೇಲೆ ದಾಳಿ ನಡೆದ ಸ್ಥಳದ ಬಳಿ ಪತ್ತೆಯಾಗಿದ್ದ ಹೆಜ್ಜೆ ಗುರುತುಗಳು ಚಿರತೆಯದ್ದಾಗಿಲ್ಲ, ಬೇರೆ ಪ್ರಾಣಿಯದ್ದಾಗಬಹುದು ಎಂದು ಹೇಳಿದ್ದರು.
ಆದರೆ, ಬುಧವಾರ ಮತ್ತೆ ಚಿರತೆ ಕಂಡುಬಂದಿರುವುದು ಈ ನಿರ್ಧಾರವನ್ನು ಪ್ರಶ್ನಿಸುವಂತೆ ಮಾಡಿದೆ. ತೋಟಪ್ಪ ಎಂಬ ವ್ಯಕ್ತಿ ದೊಗರನಾಯಕನಹಳ್ಳಿ-ವಾರಹುಣಸೇನಹಳ್ಳಿ ಬಳಿ ಚಿರತೆ ಹಾದು ಹೋಗುವುದನ್ನು ಕಣ್ಣಾರೆ ಕಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರೊಂದಗಿದೆ. ಮೇಕೆ ಮೇಲೆ ದಾಳಿ ನಡೆಸಿದ ಪ್ರಾಣಿಯು ನಿಜವಾಗಲೂ ಚಿರತೆಯೇ ಅಥವಾ ಬೇರೆ ಪ್ರಾಣಿಯೇ ಎಂಬುದನ್ನು ಖಚಿತಪಡಿಸಿಕೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
“ನಾವು ಚಿರತೆಯನ್ನು ನೋಡಿದ್ದೇವೆ ಎಂದರೆ, ಮೊಬೈಲ್‌ನಲ್ಲಿ ಫೋಟೋ ತೆಗೆದು, ವೀಡಿಯೋ ಮಾಡಿ ಕಳಿಸಿ ಎಂದು ಹೇಳುತ್ತಾರೆ. ಆದರೆ, ಚಿರತೆ ಕಾಣಿಸಿಕೊಂಡರೆ ಹೃದಯವೇ ನಿಂತು ಹೋದಂತಾಗುತ್ತದೆ, ಕೈ ಕಾಲು ನಡುಗುತ್ತದೆ, ಗಂಟಲು ಒಣಗುತ್ತದೆ. ಈ ಸ್ಥಿತಿಯಲ್ಲಿ ನಾವು ಹೇಗೆ ಫೋಟೋ, ವೀಡಿಯೋ ತೆಗೆದುಕೊಳ್ಳುತ್ತೇವೆ?” ಎಂದು ಗ್ರಾಮಸ್ಥರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.