Cheemangala, Sidlaghatta : ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ ಆಕ್ಟ್ (ಕೆ.ಪಿ.ಎಂ.ಎ) ನೋಂದಣಿಯಾಗಿರದ ತಾಲ್ಲೂಕಿನ ಚೀಮಂಗಲ ಗ್ರಾಮದ ಖಾಸಗಿ ಕ್ಲಿನಿಕ್ ಅನ್ನು ಬುಧವಾರ ವೈದ್ಯಾಧಿಕಾರಿಗಳ ತಂಡ ಮುಚ್ಚಿಸಿದ್ದಾರೆ.
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಕೆ.ಪಿ.ಎಂ.ಇ ಯಲ್ಲಿ ನೋಂದಣಿ ಆಗದೆ ಆಯುಷ್ ವೈದ್ಯರೆಂದು ಹೇಳಿಕೊಂಡು ನಕಲಿ ವೈದ್ಯರೊಬ್ಬರು ಇಲಾಖೆ ನಿಯಮಗಳನ್ನು ಗಾಳಿ ತೂರಿ ಕ್ಲಿನಿಕ್ ತೆರೆದು ರಾಜಾರೋಷವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವರೆಂಬ ಮಾಹಿತಿ ಆಧಾರಿಸಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಗೂ ತಂಡ ಭೇಟಿ ನೀಡಿ ಪರಿಶೀಲಿಸಿದರು. ಪರವಾನಗಿ ಇಲ್ಲದ ಕಾರಣ ಕ್ಲಿನಿಕ್ ಮುಚ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ವೈದ್ಯರ ದಾಖಲಾತಿ ಪರಿಶೀಲನೆ ನಡೆಸಿದಾಗ, ಕೆಪಿಎಂಇಯಲ್ಲಿ ಯಾವುದೇ ನೊಂದಣಿ ಆಗದೇ ತಾನು ಆಯುಷ್ ವೈದ್ಯನೆಂದು ಹೇಳಿಕೊಂಡು ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದುದು ತಿಳಿದುಬಂದಿದೆ. ಕೆ.ಪಿ.ಎಂ.ಇ ಯಲ್ಲಿ ನೊಂದಣಿ ಆದ ಬಳಿಕ ಕ್ಲಿನಿಕ್ ತೆರೆಯುವಂತೆ ಸೂಚಿಸಿ ಆರೋಗ್ಯಾಧಿಕಾರಿಗಳು ಕ್ಲಿನಿಕ್ ಮುಚ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, “ಯಾವುದೇ ಕ್ಲಿನಿಕ್ ಮಾಡಬೇಕಾದರೆ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಕೆ.ಪಿ.ಎಂ.ಎ ಯಲ್ಲಿ ಅರ್ಜಿ ಸಲ್ಲಿಸಿ, ಸ್ಥಳ ಪರಿಶೀಲನೆಯ ನಂತರ ಡಿ.ಸಿ ಮತ್ತು ಡಿ.ಎಚ್.ಒ ಅವರಿಂದ ನೋಂದಣಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ವಿದ್ಯಾರ್ಹತೆಯಿಲ್ಲದೆ ರೋಗಿಗಳ ಜೀವದೊಂದಿಗೆ ಚೆಲ್ಲಾಟ ಆಡಬಾರದು. ಬಯೋ ಮೆಡಿಕಲ್ ವೇಸ್ಟ್ ಬಗ್ಗೆ ಲೈಸೆನ್ಸ್ ಹೊಂದಿರಬೇಕು. ಪೊಲ್ಯೂಶನ್ ಬೋರ್ಡ್ ನಲ್ಲಿ ಪ್ರಮಾಣಪತ್ರ ಹೊಂದಿರಬೇಕು. ಸಾರ್ವಜನಿಕರೂ ಸಹ ವೈದ್ಯರ ವಿದ್ಯಾರ್ಹತೆಯನ್ನು ಗಮನಿಸಬೇಕು” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ನಿರೀಕ್ಷಣಾದಿಕಾರಿ ದೇವರಾಜ್ ಇದ್ದರು.