Sidlaghatta : ಕಾಯಿಲೆ ಬರುವುದಕ್ಕೂ ಮುನ್ನ ಮುನ್ನೆಚ್ಚರಿಕೆ ಮುಖ್ಯ ವಾಗಿದ್ದು ಯಾವುದೇ ಸಂಕೋಚನೆಗೂ ಒಳಪಡದೆ ನಿಮ್ಮ ದೈಹಿಕವಾಗಿ ನಿಮ್ಮಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ವೈದ್ಯ ರಲ್ಲಿ ಸಮಾಲೋಚನೆ ಮಾಡಬೇಕು ಎಂದು ಜೈನ್ ಮಿಷನ್ ಆಸ್ಪತ್ರೆಯ ಡಾ.ವಾಣಿ ತಿಳಿಸಿದರು.
ನಗರದ ಶ್ರೀ ವಾಸವಿ ಕಲ್ಯಾಣ ಮಂಟಪ ದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ಯಾನ್ಸರ್ ಇಂದಿನ ವೈಜ್ಞಾನಿಕ ಯುಗದಲ್ಲಿ ವಾಸಿಯಾಗದ ಮಾರಣಾಂತಿಕ ಕಾಯಿಲೆ ಅಲ್ಲ. ಜನರು ಅದರಲ್ಲೂ ಮಹಿಳೆಯರು ತಮ್ಮಲ್ಲಿನ ರೋಗ ಲಕ್ಷಣಗಳ ಬಗ್ಗೆ ಹೇಳಿಕೊಳ್ಳಲು ಸಂಕೋಚ ಪಡಬಾರದು. ಕ್ಯಾನ್ಸರ್ ಮೊದಲನೆಯ ಹಂತ ದಲ್ಲೇ ವೈದ್ಯಕೀಯ ಚಿಕಿತ್ಸೆ ಪಡೆದರೆ ಖಂಡಿತ ಗುಣಪಡಿಸಲು ಸಾಧ್ಯ.
ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಆಗುವ ದೈಹಿಕ ಬದಲಾವಣೆಗಳನ್ನು ವೈದ್ಯರ ಬಳಿ ಚರ್ಚಿಸದೆ ನಿರ್ಲಕ್ಷ್ಯ ತೋರಿದ್ದರ ಪರಿಣಾಮವಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತದೆ. ಜೈನ್ ಮಿಷನ್ ಆಸ್ಪತ್ರೆಯ ಆಡಳಿತ ಮಂಡಳಿ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ರೀತಿಯ ಕ್ಯಾನ್ಸರ್ ತಪಾಸಣೆಯ ಶಿಬಿರಗಳನ್ನು ಏರ್ಪಾಡು ಮಾಡುತ್ತಿದೆ. ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಹೇಳಿದರು.
ಶಿಬಿರದ ನಂತರದಲ್ಲೂ ಚಿಕ್ಕಬಳ್ಳಾಪುರದ ಜೈನ್ ಮಿಷನ್ ಆಸ್ಪತ್ರೆಯಲ್ಲಿ ಉಚಿತವಾಗಿ ತಪಾಸಣೆ ಮಾಡಲಾಗುವುದು ಎಂದರು.
ನಗರ ಸಭೆಯ ಸದಸ್ಯ ಅನೀಲ್ ಮಾತನಾಡಿ, ಮಧ್ಯಮ ಮತ್ತು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಜೈನ್ ಆಸ್ಪತ್ರೆಯ ಶಿಬಿರಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಟಿ.ಎ.ಕೃಷ್ಣಯ್ಯ ಶೆಟ್ಟಿ, ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ರೂಪಸಿ ರಮೇಶ್, ಬಾಲಾಜಿ ನಾಥ್, ಡಾ. ಪ್ರತೀಕ್ಷಾ ಹಾಜರಿದ್ದರು.