Sidlaghatta : “ಸ್ವಚ್ಛತಾ ಸೇವಾ ಹಿ ಆಂದೋಲನ” ದ ಭಾಗವಾಗಿ ತಾಲ್ಲೂಕಿನ ಬ್ಯಾಟರಾಯಸ್ವಾಮಿ ದೇವಾಲಯದ ಪ್ರಾಂಗಣದಲ್ಲಿರುವ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿರುವುದಾಗಿ ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ತಿಳಿಸಿದರು.
ತಾಲ್ಲೂಕಿನ ಬ್ಯಾಟರಾಯಸ್ವಾಮಿ ದೇವಾಲಯದ ಕಲ್ಯಾಣಿಯನ್ನು ಮಂಗಳವಾರ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಯೊಂದಿಗೆ ಸ್ವಚ್ಛಗೊಳಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆ, ಅಂಗನವಾಡಿ, ಸರ್ಕಾರಿ ಕಟ್ಟಡ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದವರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ಶ್ರಮದಾನದ ಮೂಲಕ ಸ್ವಚ್ಛತೆ ಕಾರ್ಯವನ್ನು ಕೈಗೊಳ್ಳುವ ಮೂಲಕ ಪ್ರತಿಯೊಬ್ಬರಲ್ಲೂ ಸ್ವಚ್ಛತೆಯ ಅರಿವನ್ನು ಮೂಡಿಸಲಾಗುತ್ತಿದೆ.
ನಮ್ಮ ಮನೆಗಳನ್ನು ಸ್ವಚ್ಛವಾಗಿಡುವಂತೆ ಬೀದಿ, ಗಟಾರ, ಕಚೇರಿಗಳನ್ನು ಸ್ವಚ್ಛವಾಗಿಡಬೇಕಾಗಿದೆ. ಶ್ರಮದಾನ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಸ್ವಚ್ಛತಾ ಸಪ್ತಾಹ ಕೇವಲ ಒಂದು ವಾರಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡೀ ಸ್ವಚ್ಛತೆಯನ್ನು ಕಾಪಾಡುವ ಮನೋಭಾವವನ್ನು ಬೆಳೆಸಬೇಕಿದೆ. ನಮ್ಮ ಊರು ಎಂಬ ಅಭಿಮಾನ ಪ್ರತಿಯೊಬ್ಬರಲ್ಲೂ ಇದ್ದರೆ ಅಭಿವೃದ್ಧಿ ಸಾಧ್ಯವಿದೆ. ಸ್ವಚ್ಛತೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಇತರರಿಗೆ ಮಾದರಿಯಾಗಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಸದಸ್ಯರು, ಸಿಬ್ಬಂದಿ, ಪಿಡಿಒಗಳು ಹಾಜರಿದ್ದರು.