Sidlaghatta : ಶಿಡ್ಲಘಟ್ಟದ ಮಯೂರ ವೃತ್ತದಲ್ಲಿರುವ ಬಿಜೆಪಿ ಸೇವಾಸೌಧದಲ್ಲಿ ಶನಿವಾರ BJP ತಾಲ್ಲೂಕು ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಹಗರಣಗಳ ಬಲೆಯಲ್ಲಿ ಸಿಲುಕಿರುವ ಸಿ.ಎಂ. ಮತ್ತು ಡಿ.ಸಿ.ಎಂ ದೊಡ್ಡ ಬಂಡೆಯನ್ನು ತಮ್ಮ ಮೇಲೆ ಹಾಕಿಕೊಂಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡ ಮಾತನಾಡಿ, ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಿ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ಎಲ್ಲದರ ಬೆಲೆ ಏರಿಸಿದೆ. ಕಾರ್ಯಕರ್ತರು ಸಕಾರಾತ್ಮಕ ಚಿಂತನೆ, ಕಾರ್ಯಯೋಜನೆ ರೂಪಿಸಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಶಿಡ್ಲಘಟ್ಟದಲ್ಲಿ ಕಮಲ ಅರಳಲು ಸಾಧ್ಯ ಎಂದು ಹೇಳಿದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಿಳಿಸಿ, ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ವ್ರತದಂತೆ ಮಾಡಬೇಕು. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜೋಡೆತ್ತುಗಳ ಪಡೆ ತುಂಬಾ ಚೆನ್ನಾಗಿ ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಸಂಘಟಿಸುತ್ತಿದ್ದು, ಮುಂದಿನ ದಿನಗಳು ಬಿಜೆಪಿ ಪಕ್ಷಕ್ಕೆ ಆಶಾದಾಯಕವಾಗಿದೆ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಆನಂದ್ ಗೌಡ ಮಾತನಾಡಿ, ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ತಳಮಟ್ಟದಲ್ಲಿ ಬೇರು ಬಿಟ್ಟಾಗ ಮಾತ್ರ ಮರವು ಒಳ್ಳೆಯ ಫಲವನ್ನು ಕೊಡಲು ಸಾಧ್ಯ ಎಂದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡ, ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರ ಗೌಡ , ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಆನಂದ್ ಗೌಡ, ನಗರ ಮಂಡಲ ಅಧ್ಯಕ್ಷ ನರೇಶ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನರೇಶ್, ನಗರ ಸಭಾ ಸದಸ್ಯ ನಾರಾಯಣ ಸ್ವಾಮಿ , ಬಿಜೆಪಿ ತಾಲ್ಲೂಕು ಅಧ್ಯಕ್ಷೆ ಚಾತುರ್ಯ, ನಗರ ಮಂಡಲ ಅಧ್ಯಕ್ಷೆ ತ್ರಿವೇಣಿ , ಬಿಜೆಪಿ ಮುಖಂಡರಾದ ಡಾ. ಸತ್ಯನಾರಾಯಣ ರಾವ್, ಚಲುವ ರಾಜ್, ಶ್ರೀಧರ್, ಮೋಹನ್ ಹಾಜರಿದ್ದರು.