Home News JDS ಎಲ್ಲಿದೆ ಎನ್ನುವ ಮುಖ್ಯಮಂತ್ರಿಗಳಿಗೆ ಫಲಿತಾಂಶದ ದಿನ ಉತ್ತರ ಸಿಗುತ್ತದೆ

JDS ಎಲ್ಲಿದೆ ಎನ್ನುವ ಮುಖ್ಯಮಂತ್ರಿಗಳಿಗೆ ಫಲಿತಾಂಶದ ದಿನ ಉತ್ತರ ಸಿಗುತ್ತದೆ

0
Sidlaghatta BJP JDS Election Alliance Meeting

Sidlaghatta : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು JDS ಎಲ್ಲಿದೆ? ಜೆಡಿಎಸ್ ಎಲ್ಲಿದೆ? ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಕೋಲಾರ ಸಂಸತ್ ಕ್ಷೇತ್ರದಲ್ಲಿ BJP JDS ಮೈತ್ರಿ ಪಕ್ಷದ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ JDS ಪಕ್ಷ ಇಲ್ಲಿ ಇದೆ ಎಂದು ಸಿದ್ದರಾಮಯ್ಯನವರಿಗೆ ನಾವು ಸಂದೇಶ ರವಾನಿಸಬೇಕು ಎಂದು ಶಿಡ್ಲಘಟ್ಟದ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ಬಸ್ ನಿಲ್ದಾಣ ಬಳಿ ಇರುವ ಅಂಜನಾದ್ರಿ ಭವನದಲ್ಲಿ ಬುಧವಾರ ನಡೆದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಸಮನ್ವಯ ಸಭೆಯಲ್ಲಿ ನೆರೆದಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದಕ್ಕೂ ಮೊದಲು ನಮ್ಮ ಭಾರತವು ಅಭಿವೃದ್ದಿ ರಾಷ್ಟ್ರಗಳಲ್ಲಿ 10ನೇ ಸ್ಥಾನದಲ್ಲಿತ್ತು, ಇದೀಗ 5ನೇ ಸ್ಥಾನಕ್ಕೇರಿದ್ದು ಇನ್ನೈದು ವರ್ಷ ಪ್ರಧಾನಿಯಾಗಿ ಅಧಿಕಾರ ನಡೆಸಿದರೆ ನಮ್ಮ ದೇಶವು ಜಗತ್ತಿನಲ್ಲಿ 3ನೇ ಸ್ಥಾನಕ್ಕೇರುವುದರಲ್ಲಿ ಅನುಮಾನವೇ ಇಲ್ಲ ಎಂದರು.

ಹಾಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ ಬಾಬುಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು. ಆ ಮೂಲಕ ಸುಭದ್ರ ದೇಶವನ್ನು ನಿರ್ಮಿಸಲು ನಾವೆಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ನಮಗೆ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದಂತ ಕಾಂಗ್ರೆಸ್ ಪಕ್ಷಕ್ಕೆ ಯಾವುದೆ ಕಾರಣಕ್ಕೂ ಮತ ನೀಡಬೇಡಿ. ಒಂದೊಮ್ಮೆ ಕಾಂಗ್ರೆಸ್‌ ಗೆ ಮತ ನೀಡಿದರೆ ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂದರು.

ಇಂದು ನಾವು ನೀವೆಲ್ಲರೂ ನೆಮ್ಮದಿಯ ಸಮಾನತೆಯ ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸಂವಿಧಾನ ಕಾರಣ. ಆದರೆ ಅಂತಹ ಸಂವಿಧಾನವನ್ನು ನೀಡಿದ ಪುಣ್ಯಾತ್ಮ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೆ ಸೋಲಿಸಿದ ಅಪ ಕೀರ್ತಿ ಕಾಂಗ್ರೆಸ್ ಪಕ್ಷದ್ದು ಎಂದರು.

ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಬಿಜೆಪಿಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ನಾವೆಲ್ಲರೂ ಸುರಕ್ಷತೆ ಸುಭದ್ರವಾಗಿ ಜೀವನ ನಡೆಸಬೇಕೆಂದರೆ ದೇಶಕ್ಕೆ ನರೇಂದ್ರ ಮೋದಿ ಅವರೆ ಮತ್ತೊಮ್ಮೆ ಪ್ರಧಾನಿ ಆಗಬೇಕು. ರಾಜ್ಯ ಸುಭಿಕ್ಷವಾಗಿರಬೇಕೆಂದರೆ ಇಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಸಾಧಿಸಿ ಉತ್ತಮ ಆಡಳಿತ ನೀಡಬೇಕೆಂದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಗಟ್ಟಿಯಾಗಿದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂಘಟಿತವಾಗುತ್ತಿರುವ ಬಿಜೆಪಿಯೂ ಜನರ ಮನ ಗೆದ್ದಿದೆ. ಎರಡೂ ಪಕ್ಷಗಳು ಇದೀಗ ಮೈತ್ರಿಯಾಗಿದ್ದು ಮೈತ್ರಿ ಅಭ್ಯರ್ಥಿ ಮಲ್ಲೇಶ್‌ ಬಾಬು ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ಶತ ಸಿದ್ದ ಎಂದರು.

ರಾಜ್ಯದಲ್ಲಿ ಸಧ್ಯದ ಸ್ಥಿತಿಯಲ್ಲಿ ರೈತರು, ಮಹಿಳೆಯರು, ಯುವಕರು, ಕೂಲಿ ಕಾರ್ಮಿಕರ ಉತ್ತಮ ಬದುಕಿನ ಹಿತ ದೃಷ್ಟಿಯಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಗತ್ಯವಿದ್ದು ಅದರಂತೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಭವಿಷ್ಯದಲ್ಲೂ ಎಲ್ಲ ಹಂತದ ಚುನಾವಣೆಗಳಲ್ಲೂ ಈ ಮೈತ್ರಿ ಮುಂದುವರೆಯಲಿದೆ ಎಂದು ಹೇಳಿದರು.

ನಮ್ಮೆಲ್ಲರ ಉದ್ದೇಶ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ ನಮ್ಮ ದೇಶವನ್ನು ಜಗತ್ತಿನ ಶಕ್ತಿ ಶಾಲಿ ರಾಷ್ಟ್ರವನ್ನಾಗಿಸುವುದೆ ಆಗಿದೆ. ಅದಕ್ಕೆ ನಾವೆಲ್ಲರೂ ತನು ಮನ ಧನ ಅರ್ಪಿಸಿ ಪಕ್ಷ ಜಾತಿ ಧರ್ಮವನ್ನು ಬಿಟ್ಟು ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಸಂಸತ್‌ ಗೆ ಕಳುಹಿಸಬೇಕು ಎಂದು ಕೋರಿದರು.

ಕೋಲಾರ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಕೋಲಾರ ಸಂಸತ್ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಮಾಜಿ ಶಾಸಕ ಎಂ.ರಾಜಣ್ಣ, ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದಗೌಡ, ಬಂಕ್ ಮುನಿಯಪ್ಪ, ಡಾ.ಧನಂಜಯರೆಡ್ಡಿ, ಹುಜಗೂರು ರಾಮಯ್ಯ, ತಾದೂರು ರಘು, ಕನಕಪ್ರಸಾದ್, ಸುರೇಂದ್ರಗೌಡ, ಚಿಂತಾಮಣಿಯ ಬಿಜೆಪಿ ಮುಖಂಡ ವೇಣು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version