Sidlaghatta : ಬಿಜೆಪಿ ಪಕ್ಷವು ಎಂದಿಗೂ ಕೂಡ ಜಾತಿ ರಾಜಕಾರಣ ಮಾಡುವುದಿಲ್ಲ. ಜಾತಿ ವಿಷಯಗಳನ್ನು ಮುಂದಿಟ್ಟುಕೊಂಡು ಎಂದಿಗೂ ಚುನಾವಣೆಯನ್ನು ಮಾಡುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಶಿಡ್ಲಘಟ್ಟದ ಬಿಜೆಪಿಯ ಸೇವಾ ಸೌಧ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ನಾವು ಸಂಸತ್ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳನ್ನೂ ಎದುರಿಸುತ್ತೇವೆ ಎಂದು ಹೇಳಿದರು.
ಈ ಸಂಸತ್ ಚುನಾವಣೆಯಲ್ಲಿ ನಮ್ಮ ಬಿಜೆಪಿಯನ್ನು ಬೆಂಬಲಿಸಿ ಎನ್ಡಿಎ ಮೈತ್ರಿ ಕೂಟದೊಂದಿಗೆ ಜೆಡಿಎಸ್ ಪಕ್ಷವು ಕೈ ಜೋಡಿಸಿರುವುದರಿಂದ ನಮಗೆ ಕಳೆದ ಸಂಸತ್ ಚುನಾವಣೆಗಿಂತಲೂ ದುಪ್ಟಟ್ಟು ಉತ್ಸಾಹ ಹಾಗೂ ಗೆಲ್ಲುವ ವಿಶ್ವಾಸ ಮೂಡಿದೆ ಎಂದರು.
ರಾಹುಲ್ ಗಾಂಧಿ ಅವರು ಈ ಭಾರಿಯ ಸಂಸತ್ ಚುನಾವಣೆಯು ಸುಳ್ಳು ಮತ್ತು ಸತ್ಯದ ನಡುವೆ ನಡೆಯುವ ಚುನಾವಣೆ ಎಂದಿದ್ದಾರೆ. ಹೌದು ಈ ದೇಶದ ಜನರು ಯಾವಾಗಲು ಸತ್ಯದ ಪರವಾಗಿಯೆ ಇದ್ದು ಮೋದಿ ಅವರ ನೇತೃತ್ವದ ಎನ್ಡಿಎ ಮೈತ್ರಿ ಕೂಟಕ್ಕೆ ಪ್ರಚಂಡ ಜಯ ಸಿಗಲಿದೆ ಎಂದರು.
ಈ ಬಾರಿ ಕಾಂಗ್ರೆಸ್ ಪಕ್ಷವು ಇನ್ನಿಲ್ಲದಂತೆ ನೆಲ ಕಚ್ಚಲಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷ ಸೋತಾಗ ಎವಿಎಂ ಯಂತ್ರಗಳ ಮೇಲೆ ಅನುಮಾನ ವ್ಯಕ್ತಪಡಿಸುವುದು, ಜಾತಿ ಧರ್ಮದ ಮೇಲೆ ಚುನಾವಣೆ ನಡೆಯಿತು ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಸಹಜ, ಆದರೆ ಈ ಭಾರಿ ಅದ್ಯಾವುದೂ ನಡೆಯುವುದಿಲ್ಲ ಎಂದು ಹೇಳಿದರು.
ಒಕ್ಕಲುತನ ಮಾಡುವ ಎಲ್ಲರೂ ಒಕ್ಕಲಿಗರೆ, ಒಕ್ಕಲಿಗ ಮಠದ ಶ್ರೀಗಳು ಕೇವಲ ಒಕ್ಕಲಿಗರಿಗೆ ಸೀಮಿತವಾಗಿಲ್ಲ. ಅವರ ಸೇವಾ ಕಾರ್ಯಗಳು ಎಲ್ಲ ಜಾತಿ ಧರ್ಮವನ್ನೂ ಮೀರಿದ್ದಾಗಿವೆ. ಮಠವನ್ನಾಗಲಿ, ಶ್ರೀಗಳನ್ನಾಗಲಿ ಒಂದು ಜಾತಿ ಕುಲಕ್ಕೆ ಸೀಮಿತಗೊಳಿಸುವ ಕೆಲಸ ಆಗಬಾರದು ಎಂದರು.
ಒಕ್ಕಲಿಗರ ದಡ್ಡರೇನಲ್ಲ ಬುದ್ದಿವಂತರು. ಅವರಿಗೆ ಚುನಾವಣೆಗಳಲ್ಲಿ ದೇಶದ ಹಿತ ದೃಷ್ಟಿಯಿಂದ ಯಾರನ್ನು ಯಾವಾಗ ಆಯ್ಕೆ ಮಾಡಬೇಕೆಂದು ಸರಿಯಾಗಿ ಗೊತ್ತು ಎಂದು ಹೇಳಿದರು.
ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ, ಅರವಿಂದ ಲಿಂಬಾವಳಿ, ಮುಖಂಡ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಕಂಬದಹಳ್ಳಿ ಸುರೇಂದ್ರಗೌಡ, ಆನಂದಗೌಡ ಇನ್ನಿತರರು ಹಾಜರಿದ್ದರು.