Sidlaghatta : ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜುಲೈ 18 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ “ವಿಶ್ವಜ್ಞಾನಿ ಭೀಮೋತ್ಸವ (Bhimotsava) – 2022 ಹಾಗೂ ಸಂವಿಧಾನ ಜನಜಾಗೃತಿ ಬೃಹತ್ ಐಕ್ಯತಾ ಸಮಾವೇಶ” ಕುರಿತಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡ ಮೇಲೂರು ಮಂಜುನಾಥ್ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಕಳೆದರೂ ಸಂವಿಧಾನದ ಆಶಯಗಳು ಈಡೇರಿಲ್ಲ. ಅಸಮಾನತೆಯ ಸಮಾಜವನ್ನು ಸಮಾನತೆಯ ಸಮಾಜವನ್ನಾಗಿ ಮಾಡುವ ಎಲ್ಲಾ ಅವಕಾಶಗಳು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಜಾರಿಗೆ ತರುವ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲವಾಗಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಅವರು ತಿಳಿಸಿದರು.
ಸಂವಿಧಾನದ ಆಶಯಗಳನ್ನು ಪ್ರತಿ ಮನೆಗೂ ಪ್ರತಿಯೊಬ್ಬರ ಮನಸ್ಸಿಗೂ ತಲುಪಿಸಬೇಕು. ಆಳುವ ಸರ್ಕಾರಗಳನ್ನು ಪ್ರತಿಯೊಬ್ಬರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಆಶಯದಿಂದ ಜುಲೈ 18 ರಂದು ವಿಶ್ವಜ್ಞಾನಿ ಭೀಮೋತ್ಸವ – 2022 ಹಮ್ಮಿಕೊಂಡಿದ್ದು, ಪ್ರತಿ ಹಳ್ಳಿಯಿಂದಲೂ ಜನರನ್ನು ಜಾಗೃತಗೊಳಿಸಿ ಸಮಾವೇಶಕ್ಕೆ ಕರೆತರುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇತ್ತೀಚಿನ ಬೆಳವಣಿಗೆಗಳು ಕಂಡಾಗ ಸಂವಿಧಾನಕ್ಕೆ ಗಂಡಾಂತರ ಬಂದಿರುವುದಾಗಿ ಭಾಸವಾಗುತ್ತಿದೆ. ಕೋಮುವಾದಿ ಶಕ್ತಿಗಳು ಸಾಮರಸ್ಯವನ್ನು ಕದಡುತ್ತಿದ್ದಾರೆ. ಆಳುವ ಸರ್ಕಾರ ಸಂವಿಧಾನವನ್ನು ಬದಲಿಸಲು ಮುಂದಾಗಿದೆ. ನಮಗೆ ಎದುರಿಲ್ಲ ಎಂಬ ಸಂದೇಶ ನೀಡುತ್ತಿದ್ದಾರೆ. ಸಂವಿಧಾನದ ಆಶಯವಿರುವುದು ಜಾತ್ಯಾತೀತವಾಗಿ ಸಾಮರಸ್ಯದಿಂದ ಜನರು ಬದುಕಬೇಕೆಂಬುದು. ಸರ್ಕಾರಗಳು ಸಂವಿಧಾನದ ಆಶಯಗಳನ್ನು ಜನರಿಗೆ ತಿಳಿಸಿಕೊಡಬೇಕಾಗಿತ್ತು. ಆದರೆ ಸರ್ಕಾರಿ ಕಂಪೆನಿಗಳನ್ನು ಖಾಸಗಿಯವರಿಗೆ ವರ್ಗಾಯಿಸುತ್ತಾ, ಆರೋಗ್ಯ, ಶಿಕ್ಷಣ ಮತ್ತು ನೌಕರಿಯನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಮೀಸಲಾತಿಯನ್ನು ಹಂತಹಂತವಾಗಿ ಮೊಟಕುಗೊಳಿಸಲಾಗುತ್ತಿದೆ.
ಪಕ್ಷ ರಹಿತ, ಜಾತಿ ರಹಿತ ಹೋರಾಟ ನಡೆಸುವ ಅಗತ್ಯವಿದೆ. ಒಂದು ವೇದಿಕೆಯಲ್ಲಿ ಸಂವಿಧಾನ ಉಳಿಸುವ, ಅದರ ಆಶಯಗಳನ್ನು ವಿವರಿಸುವ ಕೆಲಸವನ್ನು ಮಾಡಲಿದ್ದೇವೆ. ಎಲ್ಲರೂ ಕೈಜೋಡಿಸಬೇಕೆಂದರು.
ಮುಖಂಡ ಎನ್.ವೆಂಕಟೇಶ್ ಮಾತನಾಡಿ, ದೇಶವು ಸತ್ಯದ ಆಧಾರದ ಮೇಲೆ ನಡೆಯಬೇಕು. ಆ ಸತ್ಯವೇ ಸಂವಿಧಾನ. ಆದರೆ ಸರ್ಕಾರ ಸತ್ಯದ ಬದಲು ಸುಳ್ಳನ್ನು ಮಕ್ಕಳ ಮಿದಿಳಿಗೂ ತುಂಬುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಜನಪ್ರತಿನಿಧಿಗಳು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವುದು ನೋಡಿದರೆ ಇವರು ಸಂವಿಧಾನವನ್ನು ತೆಗೆದು ಮನುಸ್ಮೃತಿಯನ್ನು ಪ್ರತಿಷ್ಠಾಪನೆ ಹೊರಟಿದ್ದಾರೆಂದು ತಿಳಿಯುತ್ತದೆ. ಸಮಾನತೆ, ಸ್ವಾತಂತ್ರ್ಯವನ್ನು ಕಸಿಯುವ ಹುನ್ನಾರವಿದು ಎಂದು ಆರೋಪಿಸಿದರು.
ಮುಂದಿನ ಪೀಳಿಗೆ ಸಂವಿಧಾನ ವಿರೋಧಿ ಶಕ್ತಿಗಳಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಂವಿಧಾನ ಪ್ರತಿಯೊಬ್ಬರಲ್ಲೂ ಧೈರ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ತುಂಬುತ್ತದೆ. ಹೀಗಾಗಿ ಪ್ರತಿಯೊಬ್ಬರೂ ವಿಶೇಷವಾಗಿ ಮಹಿಳೆಯರಿಗೆ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಿರುವ ಸಮಾವೇಶಕ್ಕೆ ಪ್ರತಿಯೊಬ್ಬರೂ ಭಾಗಿಯಾಗಬೇಕೆಂದು ಕೋರಿದರು.
ಮುಖಂಡರಾದ ನಾಗ ನರಸಿಂಹ, ಮುತ್ತೂರು ವೆಂಕಟೇಶ್, ಕೃಷ್ಣಮೂರ್ತಿ, ಚಿಕ್ಕಮುನಿಯಪ್ಪ, ಜ್ಞಾನೇಶ್, ಕೃಷ್ಣಪ್ಪ, ಗುರುಮೂರ್ತಿ, ಸಾದಿಕ್, ಅನ್ಸರ್ ಖಾನ್, ಕಿರಣ್ ಹಾಜರಿದ್ದರು.