ಕೋವಿಡ್ ಸೋಂಕು ಹೆಚ್ಚುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯನ್ನು ತಡೆಯುವಲ್ಲಿ ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ಆಡಳಿತ ನಡೆಸುತ್ತಿರುವವರು ಜನ ಸಮಾನ್ಯರಿಗೊಂದು, ಬಲಾಢ್ಯರಿಗೊಂದು ಕಾನೂನು ಮಾಡುತ್ತಿದೆ ಎಂದು ರಾಷ್ಟ್ರೀಯ ಜನಹಿತ ಪಕ್ಷದ ರಾಜ್ಯಾಧ್ಯಕ್ಷ ಬೆಳ್ಳೂಟಿ ವಿರೇಂದ್ರಬಾಬು ಆರೋಪಿಸಿದ್ದಾರೆ.
ತಾಲ್ಲೂಕಿನ ಬೆಳ್ಳೂಟಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸೋಂಕು ದಿನೆ ದಿನೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಎಲ್ಲರೂ ಸಹ ಕೋವಿಡ್ ನಿಯಂತ್ರಣಕ್ಕೆ ಆಧ್ಯತೆ ಕೊಟ್ಟು ಸಹಕಾರ ಕೊಡಲೇಬೇಕು ಎಂದರು.
ಕಾಂಗ್ರೆಸ್ ಪಕ್ಷವೂ ಸಹ ಈ ಸಮಯದಲ್ಲಿ ಪಾದಯಾತ್ರೆಯನ್ನು ಮುಂದೂಡಬಹುದಿತ್ತು ಇಲ್ಲವೇ ಬೇರೆ ರೀತಿಯಲ್ಲಿ ಹೋರಾಟವನ್ನು ನಡೆಸಬಹುದಿತ್ತು ಎಂದು ಹೇಳಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿ ನಡೆಸಿದ ಪಾದಯಾತ್ರೆಯನ್ನು ರಾಜ್ಯದ ಎಲ್ಲ ಜನರೂ ಗಮನಿಸುತ್ತಿದ್ದಾರೆ. ಕೋವಿಡ್ ನಿಯಮಗಳ ಉಲ್ಲಂಘನೆಯಾಗಿದೆ. ರಾಮನಗರದ ಯಾವೊಬ್ಬ ಅಧಿಕಾರಿಯೂ ಅಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವುದನ್ನು ತಡೆಯುವ ಪ್ರಯತ್ನಕ್ಕೆ ಮುಂದಾಗಿಲ್ಲ ಎಂದು ದೂರಿದರು.
ಅದೇ ಲಾಕ್‌ಡೌನ್ ಅಥವಾ ನಿಷೇಧಾಜ್ಞೆಯಲ್ಲಿ ಜನ ಸಾಮಾನ್ಯರು ಅನಿವಾರ್ಯವಾಗಿಯೋ, ಆಕಸ್ಮಿಕವಾಗಿಯೋ ಅಥವಾ ತುರ್ತು ಕೆಲಸದ ನಿಮಿತ್ತ ಮನೆಯಿಂದ ಹೊರ ಬಂದರೂ ಮನಸೋ ಇಚ್ಚೆ ಬಾರಿಸಿ ಕೇಸು ಜಡಿಯುತ್ತೀರಿ ಇಲ್ಲವೇ ದಂಡ ಹಾಕುತ್ತೀರಿ.
ಆದರೆ ಕಾಂಗ್ರೆಸ್‌ನ ಪಾದ ಯಾತ್ರೆ ವಿಚಾರದಲ್ಲಿ ಮಾತ್ರ ಯಾಕೆ ತಾರಮತ್ಯ? ದೊಡ್ಡವರಿಗೊಂದು, ಜನ ಸಮಾನ್ಯರಿಗೊಂದು ಕಾನೂನಾ? ಇಷ್ಟೆಲ್ಲವನ್ನೂ ನೋಡಿಕೊಂಡು ಸುಮ್ಮನೆ ಇರುವ ರಾಮನಗರದ ಜಿಲ್ಲಾಡಳಿತವೇ ಇದರ ಹೊಣೆ ಹೊರಬೇಕು.
ರಾಮನಗರದ ಡಿಸಿ, ಎಸ್ಪಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜತೆಗೆ ರಾಜ್ಯ ಸರ್ಕಾರವು ಕೋವಿಡ್ ನಿಯಮಗಳನ್ನು ಉಲ್ಲಂಘಿಸುವ ಯಾರೇ ಆಗಲಿ ಎಲ್ಲರ ವಿರುದ್ದವೂ ಕ್ರಮ ತೆಗೆದುಕೊಳ್ಳುವ ಮೂಲಕ ಜನ ಸಾಮಾನ್ಯರ ವಿಶ್ವಾಸ ನಂಬಿಕೆಯನ್ನು ಉಳಿಸಿಕೊಳ್ಳಬೇಕು, ಆ ಮೂಲಕ ಕಾನೂನು ಎಲ್ಲರಿಗೂ ಒಂದೆ ಎಂಬ ಸಂದೇಶವನ್ನು ರವಾನಿಸಬೇಕೆಂದು ಆಗ್ರಹಿಸಿದರು.