Belluti, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಕುಂಟೆ ಬಳಿ, ಹಿತ್ತಲಹಳ್ಳಿ ಸರ್ಕಾರಿ ಜಾಗ ಹಾಗೂ ಕೆ.ಎಸ್.ಆರ್.ಟಿ.ಸಿ ಡಿಪೋ ಹಾಗೂ ರಿಚ್ಮಂಡ್ ಫೆಲೋಶಿಪ್ ಸೊಸೈಟಿ ಜಾಗದಲ್ಲಿ ಪರಿಸರ ಪ್ರೇಮಿ ದಿವಂಗತ ಸಂತೋಷ್ ಅವರ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ ಗಿಡಗಳನ್ನು ನೆಟ್ಟು ವನಮಹೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ವರಲಕ್ಷ್ಮಿ ಸಂತೋಷ್ ಅವರು ಗಿಡ ನೆಡುವ ಮುಖಾಂತರ ಉದ್ಘಾಟನೆ ಮಾಡಿದರು.
ಮೋಟಿವೇಶನ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಟಿ. ಪ್ರವೀಣ್ ಕುಮಾರ್ ಮಾತನಾಡಿ, ಈ ಸಂಸ್ಥೆಯು ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಪ್ರತಿವರ್ಷದಂತೆ ಈ ವರ್ಷವೂ ಕೂಡ ಪರಿಸರದಲ್ಲಿ ಒಂದು ಬದಲಾವಣೆ ತರುವ ಉದ್ದೇಶದಿಂದ ಬೆಳ್ಳೂಟಿ ಗ್ರಾಮದಲ್ಲಿ 200 ಹೆಚ್ಚು ಗಿಡಗಳನ್ನು, 70ಕ್ಕೂ ಹೆಚ್ಚು ಸ್ವಯಂಸೇವಕರು ಬಂದು ನೆಟ್ಟಿದ್ದೇವೆ.
ಆನೂರು ಗ್ರಾಮ ಪಂಚಾಯಿತಿಯ ಪಿ.ಡಿ.ಒ ಕಾತ್ಯಾಯಿನಿ ಮಾತನಾಡಿ, ಎಲ್ಲಾ ಹಳ್ಳಿಗಳಲ್ಲಿಯೂ ಕೂಡ ಪರಿಸರ ಪ್ರೀತಿಯ ಕಾರ್ಯದಲ್ಲಿ ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದು ಹೇಳಿದರು.
ನವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಮುನಿರಾಜು ಮಾತನಾಡಿ, ದಿವಂಗತ ಬೆಳ್ಳೂಟಿ ಸಂತೋಷ ರವರು ಸುಮಾರು 11 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದು ಅದೇ ರೀತಿಯಾಗಿ ಅವರ ಹಾಕಿಕೊಟ್ಟ ದಾರಿಯಲ್ಲಿಯೇ ನಡೆದು ಪರಿಸರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಹೇಳಿದರು.
ಮೋಟಿವೇಷನ್ ಇಂಡಿಯಾ ಬೆಂಗಳೂರು, ಸ್ಟೇಟ್ ಸ್ಟ್ರೀಟ್ ಬೆಂಗಳೂರು, ಸಿ.ಎಸ್.ಐ ಜೀವನ ಸೇವಾ ಸಂಘ ಚಿಕ್ಕಬಳ್ಳಾಪುರ, ಅರಣ್ಯ ಇಲಾಖೆ ಶಿಡ್ಲಘಟ್ಟ, ಆನೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕಾರ್ಯಕ್ರಮವು ನಡೆಯಿತು. ಅರಣ್ಯ ಇಲಾಖೆಯ ಅಧಿಕಾರಿಗಳಾದ ಸುಧಾಕರ್ ಹಾಗೂ ನಾಗಾರ್ಜುನ , ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ನೇತ್ರಾವತಿ, ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮ ಆನಂದ್, ನವ ಜೀವನ ಸೇವಾ ಸಂಸ್ಥೆಯ ಕಾರ್ಯದರ್ಶಿ ರವಿ ಮತ್ತು ಸದಸ್ಯರು, ರಿಚ್ಮಂಡ್ ಫಿಲೋಶಿಪ್ ಸೊಸೈಟಿ ಕಾರ್ಯದರ್ಶಿ ಗುರುರಾಜು, ಮೋಟಿವೇಶನ್ ಇಂಡಿಯಾ ಸಂಸ್ಥೆಯ ಸದಸ್ಯರು, ಸ್ಟೇಟ್ ಸ್ಟೇಟ್ ಸಂಸ್ಥೆಯ ಸ್ವಯಂಸೇವಕರು ಹಾಗೂ ಗ್ರಾಮದ ಮುನಿರಾಜು ಮತ್ತು ಸಾರ್ವಜನಿಕರು ಹಾಜರಿದ್ದರು.