Basavapatna, Sidlaghatta : ನೂತನ ತಾಂತ್ರಿಕತೆ ಹಾಗೂ ಉತ್ತಮ ತಳಿ ಜ್ಞಾನವನ್ನು ಬಳಸಿಕೊಂಡು ಹೆಚ್ಚು ಫಸಲನ್ನು ತೆಗೆಯುವ ಜತೆಗೆ ಮಣ್ಣಿನ ಫಲವತ್ತತೆಯ ಸಾರವನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ. ಇಲ್ಲವಾದಲ್ಲಿ ಬಹಳ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಯ ಬಸವಾಪಟ್ಟಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ಆಶ್ರಯದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಕೃಷಿ ವಸ್ತು ಪ್ರದರ್ಶನ-2024 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯಲ್ಲಿ ಕಡಿಮೆ ಬಂಡವಾಳ ಹಾಕಿ ನೂತನ ತಾಂತ್ರಿಕತೆ ಮತ್ತು ಉತ್ತಮ ತಳಿಯ ಬೀಜಗಳನ್ನು ಬಿತ್ತಿ ಹೆಚ್ಚಿನ ಫಸಲು ತೆಗೆಯಲಾಗುತ್ತಿದೆ. ಆರ್ಥಿಕವಾಗಿಯೂ ಸಾಕಷ್ಟು ಲಾಭವಾಗುತ್ತಿದೆ ಎಂಬುದು ಸಂತಸದ ವಿಷಯವೇ ಸರಿ.
ಆದರೆ ಈ ಭರದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚುತ್ತಿದೆ. ಭೂಮಿಯ ಫಲವತ್ತತೆಯ ಸಾರ ಕ್ಷೀಣಿಸುತ್ತಿದೆ. ಇದರಿಂದ ಭೂಮಿ ಬರಡಾಗುತ್ತಿದ್ದು ಅಲ್ಲಿ ಉತ್ಪತ್ತಿ ಆಗುತ್ತಿರುವ ಹಣ್ಣು ತರಕಾರಿಗಳಲ್ಲಿ ರಾಸಾಯನಿಕ ಅಂಶಗಳು ಹೆಚ್ಚಿದ್ದು ಅದನ್ನು ತಿನ್ನುವ ನಮ್ಮ ನಿಮ್ಮ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರೈತರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು, ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಬೇಕು. ಜೈವಿಕ ಗೊಬ್ಬರ ಬಳಕೆ ಹೆಚ್ಚಬೇಕು ಮತ್ತು ಬೀಜೋಪಚಾರ ಪದ್ದತಿಗಳ ಅಳವಡಿಕೆ ಮಾಡಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಗ್ರಾಮಸ್ಥರ ಸಹಕಾರದಿಂದ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಈ ಕೃಷಿ ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ಬದುಕು ಹಾಗೂ ಗ್ರಾಮಸ್ಥರ ಕೃಷಿ ಬದುಕಿನಲ್ಲಿ ನೆರವಾಗಬೇಕು. ಕೃಷಿಯಲ್ಲಿ ಬದಲಾವಣೆ ತರಬೇಕು, ಭೂಮಿಯ ಫಲವತ್ತತೆಯನ್ನು ಉಳಿಸಿಕೊಂಡು ಉತ್ತಮ ಫಸಲನ್ನು ಪಡೆಯುವಂತಾಗಬೇಕು ಎಂದು ಆಶಿಸಿದರು.
ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಮಾತನಾಡಿ, ಕೋಲಾರ ಚಿಕ್ಕಬಳ್ಳಾಪುರ ಭಾಗದ ರೈತರು ಕೃಷಿ ಮಾಡುವುದರಲ್ಲಿ ಯಾವ ವಿಜ್ಞಾನಿ ತಜ್ಞರಿಗಿಂತಲೂ ಕಡಿಮೆ ಇಲ್ಲ. ಅವರಲ್ಲಿ ಕೃಷಿ ಮಾಡುವ ಉತ್ಸಾಹ, ಇಚ್ಚೆ, ಹೊಸ ಪ್ರಯೋಗಗಳತ್ತ ಅವರ ಚಿತ್ತಕ್ಕೆ ಯಾರೂ ಸರಿ ಸಾಟಿಯಿಲ್ಲ ಎಂದರು.
ಈ ಭಾಗದ ರೈತರಲ್ಲಿನ ಕೃಷಿ ಕುರಿತಾದ ಆಸಕ್ತಿಗೆ ಅನುಗುಣವಾಗಿ ನಾವು ಕೆಲಸ ಮಾಡಬೇಕಿದೆ. ಇಂತಹ ಕೃಷಿ ವಸ್ತು ಪ್ರದರ್ಶನಗಳು ಅಂತಹ ಎಲ್ಲ ರೈತರಿಗೂ ನೆರವಾಗುವ ನಿಟ್ಟಿನಲ್ಲಿ ನಡೆಯಬೇಕು, ಕೃಷಿ ವಿದ್ಯಾರ್ಥಿಗಳು ಇಲ್ಲಿನ ರೈತರಿಂದಲೆ ಕಲಿಯಬೇಕಾದ್ದು ಬಹಳಷ್ಟಿದೆ ಎಂದು ಹೇಳಿದರು.
ನೂತನ ತಂತ್ರಜ್ಞಾನಗಳು ವಿಷಯದ ಮೇಲೆ ವಸ್ತು ಪ್ರದರ್ಶನ ನಡೆಯಿತು. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಹೈನಗಾರಿಕೆ, ಅರಣ್ಯ ಹಾಗೂ ಪಶು ಸಂಗೋಪನೆ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಿಂದ ವಸ್ತು ಪ್ರದರ್ಶನ ನಡೆಯಿತು.
ವಿದ್ಯಾರ್ಥಿಗಳು ತಮ್ಮ ವಸ್ತು ಪ್ರದರ್ಶನ ಕುರಿತು ಮಾಹಿತಿ ನೀಡಿದರು. ಮಳಮಾಚನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೂ ವಸ್ತು ಪ್ರದರ್ಶನದಲ್ಲಿ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿತ್ತು.
ತಹಶೀಲ್ಧಾರ್ ಬಿ.ಎನ್.ಸ್ವಾಮಿ, ಚುನಾವಾಣೆ ಶಾಖೆಯ ತಹಶೀಲ್ದಾರ್ ಬಿ.ಕೆ.ಶ್ವೇತ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಂಯೋಜಕ ಡಾ.ಎಂ.ವಿ.ಶ್ರೀನಿವಾಸರೆಡ್ಡಿ, ಡೀನ್ ಡಾ.ಪಿ.ವೆಂಕಟರಮಣ, ಹೈನುಗಾರಿಕೆ ವಿಭಾಗದ ಪ್ರಾಧ್ಯಾಪಕ ಡಾ.ಸುರೇಶ್, ಉಪ ಕೃಷಿ ನಿರ್ದೇಶಕಿ ಮಂಜುಳ, ಮಳಮಾಚನಹಳ್ಳಿ ಪಶು ಆಸ್ಪತ್ರೆಯ ಡಾ.ಧನಂಜಯ್, ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ರೇಷ್ಮೆ ಇಲಾಖೆ ಅಸ್ಲಂಪಾಷ, ಕೃಷಿ ಇಲಾಖೆ ಶಿವಕುಮಾರ್, ಬಸವಾಪಟ್ಟಣ ಡೇರಿ ಅಧ್ಯಕ್ಷ ಬೈರೇಗೌಡ, ಆನಂದ್, ನವೀನ್, ಶ್ರೀಕಾಂತ್, ಶಬರೀಶ, ಗಿರೀಶ್, ವಿದ್ಯಾರ್ಥಿಗಳದ ದೇವರಾಜ್, ಚಿನ್ಮಯಿ, ಡಿ. ಕೆ. ಸುಮಾ, ಗೀತಾ, ಹರ್ಷಿತ, ಜ್ಯೋತಿ, ಗೌತಮಿ, ಈಶ್ವರ್ ನಾಗರಾಜ್ ಶೆಟ್ಟಿ, ಭರತ್, ಪರಶುರಾಮ್, ಅರ್ಬಾಜ್, ಚೇತನ್, ಬೀರಲಿಂಗೇಗೌಡ, ಬೀರಲಿಂಗೇಶ್ ಹಾಜರಿದ್ದರು.