ಶಿಡ್ಲಘಟ್ಟ ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಬಸವೇಶ್ವರ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ವಿಜಯಪುರ ಬಸವ ಕಲ್ಯಾಣ ಮಠದ ಶ್ರೀ ಮಹದೇವಸ್ವಾಮಿಗಳು ಮಾತನಾಡಿದರು.
ವಚನಗಳ ಮೂಲಕ ಅಸಮಾನತೆಯ ವಿರುದ್ಧ ಸಮರ ಸಾರಿದ ಜಗಜ್ಯೋತಿ ಬಸವೇಶ್ವರರು ಈ ನಾಡು ಕಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವರು. ಮನುಜ ಜಾತಿ ಒಂದೇ ಎಂಬುವುದನ್ನು ಸಾರುವುದರ ಮೂಲಕ ಹೊಸ ಬೆಳಕು ನೀಡಿದ ಬಸವಣ್ಣನವರ ಆದರ್ಶ ಸಮಾಜದ ಕಲ್ಪನೆ ಅದ್ಭುತವಾಗಿದೆ. ಸರ್ವರು ಸಮಾನರು ಎಂಬ ಧ್ಯೇಯದೊಂದಿಗೆ ಅಸಮಾನತೆ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಯಲ್ಲಿ ಹೊಸ ಬದುಕಿನ ಕಲ್ಪನೆಯನ್ನು ಮಾನವತಾವದಿ ಬಸವಣ್ಣನವರು ನೀಡಿದ್ದಾರೆ ಎಂದು ಅವರು ತಿಳಿಸಿದರು.
ಬಸವಣ್ಣನವರ ಆದರ್ಶ ವಿಚಾರಧಾರೆಗಳ ಪಾಲನೆಯೊಂದಿಗೆ ಪ್ರತಿಯೊಬ್ಬರು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶೋಷಿತರ ಧ್ವನಿಯಾಗುವುದರ ಮೂಲಕ ಸಮಾಜದಲ್ಲಿ ಹೊಸ ಶಕೆಯನ್ನು ಆರಂಭಿಸಿದರು.ಅನುಭವ ಮಂಟಪದ ಮೂಲಕ ಹೊಸ ದಿಕ್ಕನ್ನು ನಾಗರಿಕ ಸಮಾಜಕ್ಕೆ ನೀಡಿದ ದಾರ್ಶನಿಕ ಬಸವಣ್ಣನವರು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಜಾತಿಯ ಸಂಕೋಲೆಯನ್ನು ಬಿಡುಗಡೆಗೊಳಿಸಿ ಸಾಮಾಜಿಕ ಬದಲಾವಣೆ ಹಾಗೂ ಶೋಷಿತರ ಧ್ವನಿಯಾಗಿ ಬಸವಣ್ಣನವರು ಅವತರಿಸಿದ್ದರು. ಬಸವಣ್ಣವರ ಆದರ್ಶ ಬದುಕು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರ ವಚನಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳು ಮತ್ತು ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣ ಅವರ ವಚನಗಳನ್ನು ಮಕ್ಕಳಿಗೆ ತಲುಪಿಸುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತಾಗಲು ಎಲ್ಲರೂ ಶ್ರಮಿಸಬೇಕಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕು ನಡೆಸಲು ಅವರ ವಚನಗಳು ಸಹಕಾರಿ ಎಂದರು.
ಮಹಿಳೆಯರು ತಂಬಿಟ್ಟು ದೀಪಗಳನ್ನು ಬೆಳಗಿ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿಯ ನಂತರ ಪಾನಕ ಮತ್ತು ಅನ್ನದಾಸೋಹವನ್ನು ನಡೆಸಲಾಯಿತು.
ತಹಶೀಲ್ದಾರ್ ಬಿ.ಎಸ್.ರಾಜೀವ್, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಶ್ರೀ ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಲಕ್ಷ್ಮೀನಾರಾಯಣ(ಲಚ್ಚಿ), ಶಿವಶಂಕರ್, ನಾಗರಾಜ್, ಮನೋಹರ್ ಹಾಜರಿದ್ದರು.