Sidlaghatta : ಡಿಜಿಟಲ್ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದ್ದು ನಾವು ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ವೃತ್ತಿಯಲ್ಲಿ ಕೌಶಲ್ಯವನ್ನು ಮೆರೆಯಬೇಕಿದೆ ಮತ್ತು ಬೆರಳ ತುದಿಯಲ್ಲಿ ಎಲ್ಲ ಮಾಹಿತಿ ಸಿಗುವಂತಾಗಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಮೊಬೈಲ್ ಹ್ಯಾಂಡ್‌ಸೆಟ್ ಗಳನ್ನು ಮೇಲೂರಿನ ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ನಿಮ್ಮ ಪಾತ್ರ ಬಹಳಷ್ಟು ಮುಖ್ಯವಾಗಿದೆ. ಅನೇಕ ಯೋಜನೆಗಳಿಗೆ ಮೂಲ ಆಧಾರವಾದ ಸಮೀಕ್ಷೆ, ಅಂಕಿ ಸಂಖ್ಯೆ ಎಲ್ಲವನ್ನೂ ನೀವು ಸಕಾಲಕ್ಕೆ ನಿಖರವಾಗಿ ಸರ್ಕಾರಕ್ಕೆ ಕೊಡುವ ಕೆಲಸ ಮಾಡುತ್ತಿದ್ದೀರಿ.
ನಿಮ್ಮ ಕೆಲಸದಲ್ಲಿ ಈ ಮೊಬೈಲ್ ನೆರವಿಗೆ ಬರಲಿದೆ. ತಂತ್ರಜ್ಞಾನ ಬೆಳೆಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿ, ನಾಡಿನ ಅಭಿವೃದ್ದಿಯಲ್ಲಿ ನೀವು ಕೈ ಜೋಡಿಸಿ ಎಂದು ಮನವಿ ಮಾಡಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ನವತಾಜ್ ಮಾತನಾಡಿ, ತಾಲ್ಲೂಕಿನಲ್ಲಿನ 344 ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್ ಅಭಿಯಾನದಡಿ ಮೊಬೈಲ್ ಹ್ಯಾಂಡೆಸೆಟ್ ಗಳನ್ನು ನೀಡುತ್ತಿದ್ದು ಶಾಸಕರು ಮೊಬೈಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸಾಂಕೇತಿಕವಾಗಿ ಕೆಲವರಿಗೆ ವಿತರಿಸಲಾಗಿದೆ.
ಈ ಮೊಬೈಲ್‌ನ ಆಪ್ ಮೂಲಕ ಗರ್ಭಿಣಿ ಬಾಣಂತಿ ಮಕ್ಕಳಿಗೆ ಪೌಷ್ಟಿಕ ಆಹಾರ ಸೇರಿದಂತೆ ಇತರೆ ಪದಾರ್ಥಗಳ ವಿತರಣೆ ಮಾಡಿ ಅವುಗಳಿಂದಾಗುವ ಉಪಯೋಗ ಇನ್ನಿತರೆ ಅಂಕಿ ಅಂಶಗಳ ದಾಖಲೀಕರಣವನ್ನು ಈ ಮೊಬೈಲ್ ನ ಆಪ್‌ನಲ್ಲೇ ಮಾಡಬೇಕಾಗುತ್ತದೆ ಎಂದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರವು ಪೋಷಣ್ ಅಭಿಯಾನದ ಪ್ರಗತಿಯನ್ನು ಅಲ್ಲಿಂದಲೆ ಪರಿಶೀಲಿಸಬಹುದು, ಈ ನಿಟ್ಟಿನಲ್ಲಿ ಈ ಮೊಬೈಲ್ ಆಪ್ ನೆರವಾಗಲಿದ್ದು ಮೊಬೈಲ್ ಬಳಕೆ ಕುರಿತು ಈಗಾಗಲೆ ಎಲ್ಲ ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.