Sidlaghatta : ಅಮಿತ್ ಶಾ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಘೋಷಣೆಗಳನ್ನು ಕೂಗಿದ ದಸಂಸ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ತೀವ್ರಗೊಳಿಸಿದರು. ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕ ತಾತಹಳ್ಳಿ ಚಲಪತಿ ಮಾತನಾಡಿ, ಸಂಸತ್ತಿನಲ್ಲಿ ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿದ ಹೇಳಿಕೆ ಅವರ ಅಸಹನೆಯನ್ನು ತೋರುತ್ತದೆ ಎಂದು ಆರೋಪಿಸಿದರು.
“ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಬದಲು ನಿಮ್ಮ ಮನೆಯ ದೇವರನ್ನು ಸ್ಮರಿಸಿದ್ದರೆ ಸ್ವರ್ಗವಾದರೂ ಸಿಗುತ್ತಿತ್ತು,” ಎಂಬ ಹೇಳಿಕೆಯನ್ನು ಶಾ ನೀಡಿದ್ದಾರೆ, ಇದು ಅಂಬೇಡ್ಕರ್ ಬಗ್ಗೆ ಇರುವ ಅಸಹನೆ ಹಾಗೂ ಅವಹೇಳನವನ್ನು ತೋರುತ್ತದೆ. ಅಂಬೇಡ್ಕರ್ ಅವರ ಶ್ರೇಷ್ಠ ಸಂವಿಧಾನ ನೀಡಿದ ಸೇವೆಯನ್ನು ಅರ್ಥ ಮಾಡಿಕೊಳ್ಳದೆ ಬಿಜೆಪಿ ನಾಯಕರಿಂದ ಈ ರೀತಿಯ ಹೇಳಿಕೆಗಳು ಮಾಮೂಲಾಗಿವೆ.
ಅಮಿತ್ ಶಾ ದೇಶದ ಗೃಹ ಮಂತ್ರಿಯಂತ ಹೆಮ್ಮೆಯ ಸ್ಥಾನದಲ್ಲಿದ್ದು, ಅವರಿಂದ ಈ ರೀತಿಯ ಹೇಳಿಕೆ ನಿರೀಕ್ಷಿಸಲಾಗಿರಲಿಲ್ಲ. ಶಾ ಅವರನ್ನು ಗೃಹ ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ದೇಶದ ಜನರಿಂದ ಕ್ಷಮೆ ಕೇಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರು ಶಿರಸ್ತೇದಾರ್ ಆಸಿಯಾ ಬಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎನ್.ಎ. ವೆಂಕಟೇಶ್, ಲಕ್ಕೇನಹಳ್ಳಿ ವೆಂಕಟೇಶ್, ಗಂಗಾಧರ್, ಹುಜಗೂರು ವೆಂಕಟೇಶ್, ರಾಜ್‌ಕುಮಾರ್, ದೊಡ್ಡ ತಿರುಮಳಯ್ಯ, ಮುನಿಕೃಷ್ಣಪ್ಪ ಸೇರಿದಂತೆ ಹಲವರು ಭಾಗವಹಿಸಿದರು.