
Sidlaghatta : ಕೃಷಿ ಪರಿಕರ ಮಾರಾಟಗಾರರು ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಪರವಾನಿಗೆಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಹಾಗು ರೈತರು ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ಖರೀದಿಸಿದಾಗ ಅಧಿಕೃತ ಬಿಲ್ ನೀಡಬೇಕು ಎಂದು ಉಪ ಕೃಷಿ ನಿರ್ದೇಶಕಿ ಎಂ.ಎನ್.ಮಂಜುಳ ಹೇಳಿದರು.
ನಗರದ ತಾ.ಪಂ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆ ಕುರಿತು ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ಪರಿಕರ ಮಾರಾಟಗಾರರು ರೈತ ಸ್ನೇಹಿಯಾಗಿ ವರ್ತಿಸಬೇಕು, ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಧರಪಟ್ಟಿ ಹಾಗು ದಾಸ್ತಾನು ವಿವರ ಪ್ರದರ್ಶಿಸಿರಬೇಕು. ರಸಗೊಬ್ಬರ ಖರೀದಿಸಿದ ರೈತರಿಗೆ ರಶೀದಿ ನೀಡಬೇಕು. ರಸಗೊಬ್ಬರ ಹಾಗು ಕೃಷಿ ಪರಿಕರಗಳ ಕೃತಕ ಅಭಾವ ಸೃಷ್ಟಿಸುವುದು ಸೇರಿದಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಅಂಗಡಿಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು.
ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್‌ಬಾಬು ಮಾತನಾಡಿ ಮಾರಾಟಗಾರರು ಪ್ರತಿಯೊಬ್ಬರೂ ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ರೈತರಿಗೆ ರಸಗೊಬ್ಬರ ವಿತರಣೆ ಮಾಡುವಲ್ಲಿ ಲಿಂಕ್ ಮಾಡುವುದು ಹಾಗು ರಸಗೊಬ್ಬರವನ್ನು ಅನಧಿಕೃತವಾಗಿ ದಾಸ್ತಾನು ಮಾಡುವುದು ಕಂಡು ಬಂದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಪಿ.ಆರ್.ರವಿ ಮಾತನಾಡಿ ಕೃಷಿ ಪರಿಕರ ಮಾರಾಟಗಾರರು ತಾವು ಮಾರುವ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳ ಪಿಸಿ ಮತ್ತು ಓ ಫರ್ಮುಗಳನ್ನು ತಮ್ಮ ಪರವಾನಗಿ ಪತ್ರದಲ್ಲಿ ನಮೂದಿಸಿಕೊಂಡ ನಂತರವಷ್ಟೇ ಮಾರಾಟ ಮಾಡಬೇಕು. ಪಿಓಎಸ್‌ನಲ್ಲಿ ಇರು ರಸಗೊಬ್ಬರದ ದಾಸ್ತಾನನ್ನು ತಮ್ಮ ಭೌತಿಕ ದಾಸ್ತಾನಿಗೆ ತಕ್ಕಂತೆ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕೆ ನಿರ್ದೇಶಕಿ ಮಂಜುಳ, ಕೃಷಿ ಅಧಿಕಾರಿ ನಾರಾಯಣರೆಡ್ಡಿ ಸೇರಿದಂತೆ ಕೃಷಿ ಪರಿಕರ ಮಾರಾಟಗಾರರು ಹಾಜರಿದ್ದರು.