Home News ಅಬ್ಲೂಡು ಗ್ರಾಮದಲ್ಲಿ ಐತಿಹಾಸಿಕ ವೀರಮಾಸ್ತಿಕಲ್ಲು ಪತ್ತೆ

ಅಬ್ಲೂಡು ಗ್ರಾಮದಲ್ಲಿ ಐತಿಹಾಸಿಕ ವೀರಮಾಸ್ತಿಕಲ್ಲು ಪತ್ತೆ

0
Sidlaghatta Abludu Ancient Inscription

Abludu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ವಿಶೇಷ ಶಿಲ್ಪ ಕಲಾ ಕೌಶಲ್ಯದಿಂದ ಕೂಡಿರುವ ವೀರಮಾಸ್ತಿಕಲ್ಲನ್ನು ಶಾಸನತಜ್ಞ ಧನಪಾಲ್ ಮತ್ತು ಪಿ.ಎಚ್.ಡಿ ವಿದ್ಯಾರ್ಥಿ ಶ್ರೀನಿವಾಸ.ವೈ.ಸಿ. ಪತ್ತೆ ಹಚ್ಚಿದ್ದು, ಅದನ್ನು ಸಂರಕ್ಷಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

“ಮಹಾಸತಿ” ಶಬ್ದವನ್ನು ಸರಳಿಕರಿಸಿ ಅದನ್ನು ಮಾಸ್ತಿ ಎಂದು ಸಾಮಾನ್ಯವಾಗಿ ಬಳಸುವುದುಂಟು. ಪತಿಯ ಜೊತೆಯಲ್ಲಿ ಕಾಳಗದಲ್ಲಿ ಹೋರಾಡಿಯೋ ಅಥವಾ ಆತ್ಮಬಲಿ ಮಾಡಿಕೊಳ್ಳುವುದಕ್ಕೆ ಜನರು ಆಕೆಯನ್ನು ದೈವತ್ವದ ಪಟ್ಟಕ್ಕೇರಿಸಿ ಕೊಟ್ಟ ಹೆಸರು ಸತಿ ಅಥವಾ ಮಹಾಸತಿ. ಅವರ ನೆನಪಿಗಾಗಿ ಸ್ಥಾಪಿಸಿದ ಕಲ್ಲನ್ನು ಮಾಸ್ತಿ ಕಲ್ಲು ಅಥವಾ ವೀರ ಮಾಸ್ತಿ ಕಲ್ಲು ಎನ್ನುವರು. ಗಂಡನಾದವನು ಯಾವ ಕಾರಣಕ್ಕಾಗಿ ಸತ್ತ ಎಂಬುದು ಆ ಸ್ಮಾರಕ ಶಿಲೆಯ ಪ್ರಕಾರವನ್ನು ಮತ್ತು ಶಿಲ್ಪವನ್ನು ನಿರ್ಣಯಿಸುವಲ್ಲಿ ಬಹು ಮುಖ್ಯ ಅಂಶವಾಗಿರುತ್ತದೆ. ಇಂತಹ ಸ್ಮಾರಕ ಶಿಲೆಗಳು ವೀರನ ಸ್ವಾಮಿ ಭಕ್ತಿ ಮತ್ತು ಆತನ ಮಡದಿಯ ಪತಿಭಕ್ತಿ ಪಾತಿವೃತ್ಯ ಇವೆರಡನ್ನೂ ಅಭಿವ್ಯಕ್ತಿ ಮಾಡಲು ಪ್ರಯತ್ನಿಸುತ್ತವೆ ಎಂದು ಶಾಸನತಜ್ಞ ಧನಪಾಲ್ ತಿಳಿಸಿದರು.

ಅಬ್ಲೂಡು ಗ್ರಾಮದಲ್ಲಿರುವ ಈ ವೀರಮಾಸ್ತಿಗಲ್ಲಿನಲ್ಲಿ ವೀರನು ವೀರಾವೇಶದಿಂದ ಹೋರಾಡುತ್ತಾ ಮರಣ ಹೊಂದಿದ್ದಾನೆ. ಅವನ ಬಲಗೈಯಲ್ಲಿ ಖಡ್ಗವು ಎಡಗೈಯಲ್ಲಿ ಗುರಾಣಿಯನ್ನು ಹಿಡಿದಿದ್ದಾನೆ. ವೀರನು ವೀರಾವೇಶದಿಂದ ಹೋರಾಡಿದ್ದಾನೆ ಎಂಬ ಕುರುಹಾಗಿ ಸೊಂಟದಲ್ಲಿರುವ ವಸ್ತ್ರವು ಗಾಳಿಯಲ್ಲಿ ಹಾರಾಡುತ್ತಿದೆ. ಶಿಲ್ಪಿಯು ಶಿಲ್ಪವನ್ನು ಕೆತ್ತುವಾಗ ತನ್ನ ಕಲಾಕೌಶಲ್ಯವನ್ನು ಮೆರೆದಿದ್ದಾನೆ.

ಶಿಲ್ಪಿಯು ವೀರನ ದೇಹಭಾಗವನ್ನು ಕೆತ್ತುವಾಗ ವೀರನಿಗಿರಬಹುದಾದ ಅಂಗಸೌಷ್ಟವ ಅಂದರೆ ಬಲಿಷ್ಠವಾದ ತೊಡೆಗಳನ್ನು ಕೆತ್ತಿ, ಅಗಲವಾದ ಎದೆಭಾಗವನ್ನು, ಬಲಿಷ್ಠವಾದ ತೋಳನ್ನು ವೀರನಿಗಿರಬಹುದಾದ ಮುಖಭಾವವನ್ನು ಕೆತ್ತಿದ್ದಾನೆ.

ವೀರನು ಸೊಂಟದಲ್ಲಿ ಬಾಕುವನ್ನು ಸೊಂಟಪಟ್ಟಿಯಲ್ಲಿ ಸಿಕ್ಕಿಸಿದ್ದಾನೆ ಸೊಂಟ ಪಟ್ಟಿಯನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾನೆ. ತೋಳಿಗೆ ತೋಳ್ಬಂದಿ, ಕೈಗಡ, ಕಾಲ್ಗಡಗ ಧರಿಸಿದ್ದಾನೆ. ಕುತ್ತಿಗೆಯಲ್ಲಿ ನಾಲ್ಕು ವಿವಿಧ ವಿನ್ಯಾಸದ ಸರಗಳನ್ನು ಧರಿಸಿದ್ದಾನೆ. ಕಿವಿಗೆ ಅಲಂಕಾರಯುತವಾದ ಕರ್ಣಕುಂಡಲವನ್ನು ಧರಿಸಿದ್ದಾನೆ. ತಲೆಗೆ ಶಿರಸ್ತ್ರಾಣದಂತಹ ಪೇಟ ಕಟ್ಟಿ ಸುಮಾರು ಮೂರು ಕುಚ್ಚುಗಳಿರುವ ಹಗ್ಗದಿಂದ ಪೇಟಕ್ಕೆ ಸುತ್ತಿಕೊಂಡಿದ್ದಾನೆ.

ವೀರನ ಪಕ್ಕದಲ್ಲಿರುವ ಸತಿಯು ವಿನೀತ ಭಾವದಿಂದ ನಿಂತಿದ್ದು, ಅದ್ಭುತವಾದ ನೆರಿಗೆಯುಳ್ಳ ಸೀರೆಯ ರೀತಿಯ ವಸ್ತ್ರ ಧರಿಸಿದ್ದಾಳೆ. ವೀರನಂತೆಯೇ ಈಕೆಯು ತೋಳ್ಬಂದಿ, ಕೈಬಳೆ, ಕಿವಿಗೆ ಕರ್ಣಕುಂಡಲ ಧರಿಸಿದ್ದಾಳೆ. ಮುಡಿಯನ್ನು ತುರುಬಿನಾಕಾರದಲ್ಲಿ ಕಟ್ಟಿದ್ದಾಳೆ. ತನ್ನ ಎಡಗೈಯಲ್ಲಿ ಹೂವನ್ನು, ಬಲಗೈಯಲ್ಲಿ ಗಿಂಡಿಯನ್ನು ಹಿಡಿದಿರುವ ಕಾರಣ ನಿಸ್ಸಂಶಯವಾಗಿ ಈ ಶಿಲ್ಪ ವೀರಮಾಸ್ತಿಕಲ್ಲು ಎಂದು ಹೇಳಬಹುದು ಎಂದು ಶಾಸನತಜ್ಞ ಧನಪಾಲ್ ಮತ್ತು ಪಿ.ಎಚ್.ಡಿ ವಿದ್ಯಾರ್ಥಿ ಶ್ರೀನಿವಾಸ.ವೈ.ಸಿ. ವಿವರಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version