Sidlaghatta : ಹನಿ ನೀರಾವರಿ ಪದ್ದತಿಯಡಿ ಕೃಷಿ ಇಲಾಖೆಯಿಂದ ವಿತರಿಸಲಾದ ಪೈಪ್ ಮತ್ತು ಲ್ಯಾಟರಲ್‌ಗಳು ಕಳಪೆಯಾಗಿದ್ದು, ಈ ಬಗ್ಗೆ ಸಂಬಂಧಿಸಿದ ಕಂಪನಿ ಮತ್ತು ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲದ ಕಾರಣ, ರೈತನು ತನ್ನ ಆಕ್ರೋಶ ವ್ಯಕ್ತಪಡಿಸುತ್ತಾ ಪೈಪುಗಳನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗ ಬಿಸಾಡಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣರೆಡ್ಡಿ ಅವರು ತಮ್ಮ ತೋಟದಲ್ಲಿ ಹನಿ ನೀರಾವರಿಗಾಗಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಪ್ರೀಮಿಯರ್ ಕಂಪನಿಯ ಪೈಪ್ ಮತ್ತು ಲ್ಯಾಟರಲ್‌ಗಳನ್ನು ಪಡೆದುಕೊಂಡಿದ್ದರು. ಆದರೆ ಅವುಗಳು ಸಂಪೂರ್ಣ ಕಳಪೆಯಾಗಿದ್ದು, ಜಾಯಿಂಟ್ ಸರಿಯಾಗಿ ಹೊಂದಾಣಿಕೆಯಾಗದೆ, ನೀರು ಒತ್ತಡದಲ್ಲಿ ಪೈಪ್‌ಗಳಿಂದ ಹೊರಬಿದ್ದು ಬೆಳೆ ಒಣಗಲು ಕಾರಣವಾಗಿದೆ.
ಈ ಕುರಿತು ಅವರು ಕೃಷಿ ಸಹಾಯಕ ನಿರ್ದೇಶಕ ರವಿ ಹಾಗೂ ಪೈಪ್ ಪೂರೈಕೆದಾರ ಕಂಪನಿಯ ಮುಖ್ಯಸ್ಥರಿಗೆ ದೂರು ನೀಡಿದಾಗ, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಪೈಪ್‌ಗಳು ಕಳಪೆಯಾಗಿರುವುದನ್ನು ಒಪ್ಪಿಕೊಂಡು ಅವುಗಳನ್ನು ಬದಲಿಸುವ ಭರವಸೆ ನೀಡಿದ್ದರು. ಆದರೆ ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಲಕ್ಷ್ಮಿನಾರಾಯಣರೆಡ್ಡಿ ಅವರು ಕೃಷಿ ಇಲಾಖೆಯ ಕಚೇರಿ ಮುಂದೆ ತಮ್ಮ ಪೈಪುಗಳನ್ನು ಬಿಸಾಡಿ ಪ್ರತಿಭಟನೆ ನಡೆಸಿದರು.