ತಾಲ್ಲೂಕಿನ ಮೇಲೂರು ಗ್ರಾಮದ ಮಾತೃಮಡಿಲು ದಿವ್ಯಾಂಗರ ಸೇವಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಶಿವಕುಮಾರ ಮಹಾಸ್ವಾಮೀಜಿ ಜಯಂತ್ಯುತ್ಸವ, ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಗಂಧದ ಕೊರಡಿನಂತೆ ನಾಡುನುಡಿಗಾಗಿ ತನ್ನ ಇಡೀ ಜೀವನವನ್ನು ಸವೆಸಿ ಲಕ್ಷಾಂತರ ಮಕ್ಕಳ ಬದುಕಿಗೆ ಬಾಳಿನ ಜ್ಯೋತಿಯನ್ನು ಹಚ್ಚುವಲ್ಲಿ ಶ್ರೀ ಶಿವಕುಮಾರಮಹಾಸ್ವಾಮೀಜಿ ಅವರ ಶ್ರಮ ಅಡಗಿದೆ. ಶ್ರೀ ಮಠದಲ್ಲಿರುವ ಪ್ರತಿ ಕಟ್ಟಡದ ಒಂದೊಂದು ಕಲ್ಲೂ ಅವರ ಹೆಸರನ್ನು ಪ್ರತಿನಿಧಿಸುವಂತಿದೆ. ಅವರ ಕಾರ್ಯಗಳಲ್ಲಿ ಧರ್ಮ, ತ್ಯಾಗ, ಮಾನವೀಯತೆಯ ಗುಣಗಳು ಅಡಗಿದ್ದು ಅವು ಸರ್ವರಿಗೂ ಅನುಕರಣೀಯವಾಗಿವೆ. ಲಕ್ಷಾಂತರ ಮಕ್ಕಳಿಗೆ ತ್ರಿವಿಧದ ದಾಸೋಹವನ್ನು ನಿರಂತರವಾಗಿ ಒದಗಿಸುವ ಜವಾಬ್ದಾರಿಯು ಸಾಮಾನ್ಯ ಮನುಷ್ಯರಿಂದ ಸಾಧ್ಯವಾಗುವಂತಹುದಲ್ಲ. ಸ್ವಾಮೀಜಿ ಒಂದು ಶಕ್ತಿಯಾಗಿದ್ದರು. ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಿಂತನೆ, ಚಟುವಟಿಕೆ, ಅಭೂತಪೂರ್ವ ದಾಸೋಹಗಳ ಮೂಲಕ ಮಹತ್ತರ ದಾಖಲೆ ಸೃಷ್ಟಿಸಿದ ಸ್ವಾಮೀಜಿ ಅವರು ವೈಚಾರಿಕ ಮತ್ತು ಧಾರ್ಮಿಕ ಕ್ರಾಂತಿಯ ಹರಿಕಾರರು ಎಂದು ಅವರು ಬಣ್ಣಿಸಿದರು.
ಮೇಲೂರು ಗ್ರಾಮಪಂಚಾಯಿತಿ ಅಧ್ಯಕ್ಷ ಉಮೇಶ್ ಮಾತನಾಡಿ, ಶ್ರೀ ಸಿದ್ಧಗಂಗಾ ಮಠದಲ್ಲಿ ಸ್ವಾಮೀಜಿ ಅವರು ಜಾರಿಗೊಳಿಸಿರುವ ಸಾಮಾಜಿಕ ಕಾರ್ಯಗಳಲ್ಲಿನ ಚಿಂತನೆ, ಆಚರಣೆಗಳು, ಶರಣತತ್ವಕ್ಕೆ ಅವರು ನೀಡಿದ ಗೌರವವದಿಂದಾಗಿ ವಿಶ್ವವನ್ನು ಎಚ್ಚರಿಸಬಲ್ಲ ಭಾರತದ ಚೈತನ್ಯಮೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದರು.
ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಬಸವಣ್ಣವರ ಭಕ್ತಿ, ಬುದ್ಧನ ಕಾರುಣ್ಯ, ವೈರಾಗ್ಯ, ಸರ್ವಸಮಾನತೆ, ಕಾಯಕತತ್ವ, ಸ್ತ್ರೀಸ್ವಾತಂತ್ರ್ಯ, ಗಾಂಧೀಜಿಯವರಂತೆ ಸತ್ಯನಿಷ್ಟೆ ಮತ್ತು ಸರಳತೆ, ಕೆಂಪೇಗೌಡರಂತೆ ಅನ್ನದಾಸೋಹ, ಶಿಕ್ಷಣಾಭಿವೃದ್ಧಿ, ರಾಷ್ಟ್ರನಿರ್ಮಾಣದಲ್ಲಿ ಕೈಜೋಡಿಸಿದವರು ಡಾ.ಶಿವಕುಮಾರ ಮಹಾಸ್ವಾಮೀಜಿ ಎಂದರು.
ಚಿಕ್ಕಬಳ್ಳಾಪುರ ನವಜೀವನ ಸೇವಾಸಂಘದ ಅಧ್ಯಕ್ಷ ಬೆಳ್ಳೂಟಿ ಮುನಿರಾಜು ಮಾತನಾಡಿ, ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಅವರು ಶ್ರೀ ಸಿದ್ಧಲಿಂಗೇಶ್ವರರ ಜೀವಂತ ಪ್ರತಿನಿಧಿಗಳಾಗಿದ್ದರು. ಸಿದ್ಧಿಪರುಷರೂ, ಮಹಾತಪಸ್ವಿಗಳೂ, ಪ್ರವಾದಿಯೂ ಆಗಿದ್ದವರು. ಸೇವಾಕ್ಷೇತ್ರದಲ್ಲಿ ಭಕ್ತಿಯನ್ನೇ ಬಿತ್ತಿ ಭಕ್ತಿಯನ್ನೇ ಉಂಡು ಶಿವಾನುಭವವನ್ನೇ ಸರ್ವರಿಗೂ ಹಂಚಿದವರು ಎಂದರು.
ವಚನಗಾಯನ, ಅಗ್ನಿಹೋತ್ರ ಮತ್ತಿತರ ಕಾರ್ಯಗಳು ಜರುಗಿದವು. ವಿಜಯಪುರ ನಗರ್ತ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಸುವರ್ಣಶಿವಕುಮಾರ್, ಪತಂಜಲಿ ಯೋಗಶಿಕ್ಷಣ ಸಮಿತಿ ಮಹಿಳಾ ರಾಜ್ಯ ಸಂಚಾಲಕಿ ದೀಪಾ ಜೆ.ರಮೇಶ್, ನಿವೃತ್ತ ಅಂಚೆನೌಕರ ರಾಮಾಂಜಿನಪ್ಪ, ಎಂಆರ್‌ಡಬ್ಲ್ಯೂ ನಾಗೇಶ್, ರವಿ ಹಾಜರಿದ್ದರು.