ತಾಲ್ಲೂಕಿನಾದ್ಯಂತ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಹಾಗೂ ರೇಷ್ಮೆ ಬಿಚ್ಚಾಣಿಕೆದಾರರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿ ರೇಷ್ಮೆ ಗೂಡು ಮಾರುಕಟ್ಟೆ ಉಪನಿರ್ದೇಶಕರ ಮೂಲಕ ರೇಷ್ಮೆ ಸಚಿವ ಆರ್.ಶಂಕರ್ ಅವರಿಗೆ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಭೇಟಿ ನೀಡಿದ ರೈತ ಮುಖಂಡರು, ಏಷ್ಯಾ ಖಂಡದಲ್ಲಿಯೇ ಪ್ರಸಿದ್ದಿ ಹೊಂದಿದ ಮಾರುಕಟ್ಟೆಯಲ್ಲಿ ಈ ಹಿಂದೆ ಕೆಜಿ ಗೂಡು ಸುಮಾರು 400 ರಿಂದ 500 ರೂ ವರೆಗೂ ಮಾರಾಟವಾಗುತ್ತಿತ್ತು. ಆದರೆ ಇದೀಗ ಕೆಜಿ ಗೂಡು 200-250 ಕ್ಕೆ ಮಾರಾಟವಾಗುತ್ತಿದೆ. ರೇಷ್ಮೆ ಗೂಡು ಬೆಳೆಯಲು ವೈಜ್ಞಾನಿಕವಾಗಿ ಕೆಜಿ ಯೊಂದಕ್ಕೆ ಸುಮಾರು 450 ರೂ ಗಳು ಖರ್ಚಾಗುತ್ತಿದ್ದು ರೈತರಿಗೆ ಭಾರೀ ನಷ್ಟವುಂಟಾಗುತ್ತಿದೆ. ಹಾಗಾಗಿ ಸರ್ಕಾರ ಕೂಡಲೇ ರೈತರು ಬೆಳೆಯುವ ರೇಷ್ಮೆ ಗೂಡಿಗೆ ಕೆಜಿಯೊಂದಕ್ಕೆ 450 ರೂ ಬೆಂಬಲ ಬೆಲೆ ನಿಗದಿ ಮಾಡುವುದು ಸೇರಿದಂತೆ ಆಗಿರುವ ನಷ್ಟವನ್ನು ಸಹಾಯಧನವನ್ನಾಗಿ ರೈತರ ಖಾತೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಇನ್ನು ತಾಲ್ಲೂಕಿನಲ್ಲಿ ರೇಷ್ಮೆ ಸೀರೆ, ಬಟ್ಟೆ ನೇಯುವ ಮಗ್ಗಗಳ ಕಾರ್ಖಾನೆಗಳನ್ನು ಸ್ಥಾಪಸಿದಲ್ಲಿ ಇಲ್ಲಿ ಉತ್ಪಾದನೆಯಾಗುವ ಕಚ್ಚಾ ರೇಷ್ಮೆ ಬೇರೆ ರಾಜ್ಯಗಳಿಗೆ ರಫ್ತು ಆಗುವುದನ್ನು ತಡೆಗಟ್ಟುವ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿದಂತಾಗುತ್ತದೆ. ಕೂಡಲೇ ಸ್ಥಳೀಯ ಮಾರುಕಟ್ಟೆಗೆ ತಾವುಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತಾಲ್ಲೂಕಿನ ರೈತರು ಹಾಗೂ ರೇಷ್ಮೆ ಬಿಚ್ಚಾಣಿಕೆದಾರರ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ತಮ್ಮ ಕಚೇರಿಯ ಮುಂಭಾಗ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಬೆಳ್ಳೂಟಿ ಬಿ.ಕೆ.ಮುನಿಕೆಂಪಣ್ಣ, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಡಿ.ವಿ.ನಾರಾಯಣಸ್ವಾಮಿ, ಮುರಳಿ ಹಾಜರಿದ್ದರು.