Basavapatna, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಸೋಮವಾರ ರೇಷ್ಮೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣರ ಸಹಭಾಗಿತ್ವದಲ್ಲಿ ಗ್ರಾಮೀಣ ಮೌಲ್ಯಮಾಪನ ಮತ್ತು ಅಧ್ಯಯನವನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ತೋಟಗಾರಿಕೆ ಮಾತು ಅರಣ್ಯ ವಿಭಾಗದ ಸಹ ಪ್ರಧ್ಯಾಪಕ ಡಾ. ಶಿವಪ್ಪ, ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದಲ್ಲಿ ಗ್ರಾಮದಲ್ಲಿ ನೆಲೆಸಿರುವ ಕೃಷಿ ವಿದ್ಯಾರ್ಥಿಗಳು ರೈತ ಸಮುದಾಯಕ್ಕೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ರೈತರಿಗೆ ಕೃಷಿ ತಾಂತ್ರಿಕತೆಯ ಬಗ್ಗೆ ಅರಿವು ಮೂಡಿಸಿ ತಜ್ಞರಿಂದ ಅರಿವು ಮೂಡಿಸಿ ಉತ್ತಮ ಆದಾಯದಾಯಕ ರೇಷ್ಮೆಕೃಷಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಮುಂದಿನ ಮೂರು ತಿಂಗಳ ಕಾಲ ರೈತರ ಜಮೀನುಗಳ ಮಣ್ಣುಪರೀಕ್ಷೆ, ಪಶು ಆರೋಗ್ಯ ತಪಾಸಣೆ, ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ, ಸಾವಯವ ಕೃಷಿ ಪದ್ಧತಿ, ಸಮಗ್ರ ಕೃಷಿ ವಿಧಾನಗಳ ಅರಿವು ಮೂಡಿಸುವುದು. ಮತ್ತಿತರ ಕೃಷಿ ಮತ್ತು ರೈತರ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರೈತರು ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್ ಮಾತನಾಡಿ, ಶಿಬಿರದ ವೇಳೆ ಆಗಿಂದಾಗ್ಗೆ ಮಣ್ಣು ಪರೀಕ್ಷೆಯ ಪಾರತ್ಯಕ್ಷಿಕೆ, ಮಣ್ಣಿನ ಮಾದರಿ ತೆಗೆಯುವ ವಿಧಾನ, ರೈತರು ಉತ್ತಮ ಇಳಿವರಿ ಪಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾಕ್ರಮಗಳು, ಮಣ್ಣಿನ ಸೂಕ್ತ ಪರೀಕ್ಷೆಯ ಲಾಭಗಳು, ಮಣ್ಣಿನ ಗುಣಮಟ್ಟ ವೃದ್ಧಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲಾಗುವುದು. ಸ್ಥಳೀಯವಾಗಿ ಲಭ್ಯ ಮಣ್ಣಿನ ಗುಣಮಟ್ಟಕ್ಕನುಗುಣವಾಗಿ ಆದಾಯದಾಯಕ ಕೃಷಿ ಇಂದಿನ ಅಗತ್ಯ ಎಂದರು.
ಈ ಅಧ್ಯಯನದ ಅಂಗವಾಗಿ ವಿದ್ಯಾರ್ಥಿಗಳು ಗ್ರಾಮದ ಸಾಮಾಜಿಕ ನಕ್ಷೆ, ಸಂಪನ್ಮೂಲ ನಕ್ಷೆ, ಸಂಚಾರ ನಕ್ಷೆ, ಬೆಳೆಗೋಪುರ ನಕ್ಷೆ, ಗ್ರಾಮ ನಕ್ಷೆ, ಋತುಮಾನ ನಕ್ಷೆ ಹಾಗೂ ಚಲನಶೀಲತೆಯ ನಕ್ಷೆಯನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ರಚಿಸಿದ್ದರು. ಮಣ್ಣು, ಕಲ್ಲು, ಹೂವು, ಹಣ್ಣು, ತರಕಾರಿ, ಸೊಪ್ಪು ಮುಂತಾದವುಗಳನ್ನು ಬಳಸಿ, ಹಲವು ಬಣ್ಣಗಳು ಕಾಣುವಂತೆ ಚಿತ್ರಿಸಿದ್ದ ಈ ನಕ್ಷೆಗಳು ವಿಷಯ ನಿರೂಪಣೆಯ ಜೊತೆಯಲ್ಲಿ ಆಕರ್ಷಣೀಯವಾಗಿದ್ದವು.
ಗ್ರಾಮದ ನಕ್ಷೆಯಲ್ಲಿ ವಿದ್ಯಾರ್ಥಿಗಳು ಕರಕುಶಲತೆಯಿಂದ ಗ್ರಾಮದಲ್ಲಿನ ರಸ್ತೆಗಳು, ಮನೆಗಳು ಹಾಗೂ ಮುಖ್ಯಸ್ಥಳಗಳನ್ನು ಸೂಚಿಸಿದ್ದರು. ಋತುಮಾನ ನಕ್ಷೆಯಲ್ಲಿ ವಿವಿದ ಋತುಗಳಲ್ಲಿ ಬೆಳೆಯುವ ಬೆಳೆಗಳನ್ನು ವೃತ್ತಾಕಾರದಲ್ಲಿ ಚಿತ್ರಿಸಿದ್ದರು. ಬೆಳೆಗೋಪುರದಲ್ಲಿ ಗ್ರಾಮದಲ್ಲಿ ಹೆಚ್ಚು ಬೆಳೆಯುವ ಬೆಳೆಗಳನ್ನು ಗೋಪುರಾಕಾರದಲ್ಲಿ ಚಿತ್ರಿಸಿದ್ದರು. ಸಂಪನ್ಮೂಲ ನಕ್ಷೆಯಲ್ಲಿ ಹಳ್ಳಿಯಲ್ಲಿರುವ ಕೆರೆ, ಕೃಷಿ ಹೊಂಡ, ಅರಣ್ಯ ಪ್ರದೇಶ ಮತ್ತು ವಿವಿಧ ಮಣ್ಣಿನ ಬಗ್ಗೆ ತಿಳಿಸಿದ್ದರು ಹಾಗೂ ಸಂಚಾರ ನಕ್ಷೆಯಲ್ಲಿ ದೇವರಮಳ್ಳುರು ಗ್ರಾಮದಿಂದ ಸಂಪರ್ಕಿಸುವ ಮುಖ್ಯ ಸ್ಥಳಗಳನ್ನು ಸೂಚಿಸಿದ್ದರು.
ಸಹಪ್ರಾಧ್ಯಾಪಕರಾದ ಡಾ.ಮಂಜುನಾಥ್ ಗೌಡ, ಡಾ. ಸೌಂದರ್ಯ, ಮುಖ್ಯಶಿಕ್ಷಕ ತಿರುಮಲೇಶ್, ರೈತರು, ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು, ಕೃಷಿ ವಿದ್ಯಾರ್ಥಿಗಳಾದ ವಿ.ದೇವರಾಜ್, ಚಿನ್ಮಯ್, ಡಿ.ಕೆ ಸುಮ, ಜಿ.ಜೆ.ಗೀತಾ, ಗೌತಮಿ, ಹರ್ಷಿತ, ಜ್ಯೋತಿ, ಅರ್ಬಾಜ್, ಈಶ್ವರ್ ನಾಗರಾಜ್ ಶೆಟ್ಟಿ, ಬೈರಲಿಂಗೇ ಗೌಡ, ಪರುಶುರಾಮ, ಬೀರಲಿಂಗೇಶ್, ಟಿ.ಚೇತನ್, ಭರತ್ ಹಾಜರಿದ್ದರು.