ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯ ಶೀಗೆಹಳ್ಳಿಯ ಕೆರೆ ಕೋಡಿ ಹರಿದಿದ್ದು ಗ್ರಾಮಸ್ಥರು ಹಮ್ಮಿಕೊಂಡಿದ್ದ ಕೆರೆಗೆ ಬಾಗಿನ ಅರ್ಪಣೆ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಮುನೇಗೌಡ ಮಾತನಾಡಿದರು.
ಅತಿವೃಷ್ಟಿಯಿಂದ ಮನೆ ಮಠ ಹಾಗೂ ಬೆಳೆಗಳನ್ನು ಕಳೆದುಕೊಂಡಿರುವ ನಷ್ಟದ ಸಮೀಕ್ಷೆಯನ್ನು ಪಕ್ಷ, ಜಾತಿಯ ತಾರತಮ್ಯ ಇಲ್ಲದೆ ಬೇಗನೆ ನಡೆಸಿ ವೈಜ್ಞಾನಿಕವಾಗಿ ಪರಿಹಾರ ನೀಡಬೇಕೆಂದು ಅವರು ತಿಳಿಸಿದರು.
ಧಾರಾಕಾರ ಮಳೆಯಿಂದ ರಾಜ್ಯದಲ್ಲಿ ಅಪಾರವಾದ ಬೆಳೆ ನಷ್ಟವಾಗಿದೆ. ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಸರಿಯಾದ ದಿಕ್ಕಿನಲ್ಲಿ ಸಮೀಕ್ಷೆ ನಡೆಯಬೇಕು, ನಷ್ಟಕ್ಕೆ ತಕ್ಕ ಪರಿಹಾರ ಕೊಡಬೇಕು, ಅದೂ ಸಹ ಸಕಾಲಕ್ಕೆ ಎಂದು ಆಗ್ರಹಪಡಿಸಿದರು,
ಇನ್ನು ಹೆಚ್ಚಿನ ಮಳೆಗೆ ಬೆಳೆ ನಷ್ಟವಾದರೂ ರೈತರು ಸಹಿಸಿಕೊಳ್ಳಬೇಕು. ಈ ಒಂದು ವರ್ಷದ ಬೆಳೆ ನಷ್ಟವಾದರೂ ಮುಂದಿನ ಐದು ವರ್ಷ ಕುಡಿಯುವ ನೀರಿಗೂ ಕೃಷಿಗೂ ಯೋಚನೆಯಿಲ್ಲ. ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದೆ ಎಂದು ಸಂತಸಪಟ್ಟರು.
ಕೋಡಿಹರಿದ ಕೆರೆಗೆ ಪೂಜೆ ಸಲ್ಲಿಸಿ ದೀಪಗಳನ್ನು ಬೆಳಗಿ ಬಾಗಿನ ಅರ್ಪಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್‌ಮುನಿಯಪ್ಪ, ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹುಜಗೂರುರಾಮಣ್ಣ, ಮೇಲೂರು ಬಿ.ಎನ್.ಸಚಿನ್, ತಾದೂರು ರಘು, ಕದಿರಿನಾಯಕನಹಳ್ಳಿ ರವಿಕುಮಾರ್, ಶೀಗೆಹಳ್ಳಿಯ ವೇಣುಗೋಪಾಲ್, ರಮೇಶ್, ಮಂಜುನಾಥ್ ಹಾಜರಿದ್ದರು.