ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆಯೂ ಕೂಡಾ ಧೈರ್ಯವಾಗಿ ಸ್ವಾವಲಂಬಿಯಾಗಿ ಬದುಕಲು ಕಲಿಸಿಕೊಟ್ಟಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಹಿರಿಯ ಸಾಹಿತಿಗಳಾದ ಸ ರಘುನಾಥ್ ತಿಳಿಸಿದರು.
ಶಿಡ್ಲಘಟ್ಟ ನಗರದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನತಾಣ ಕಾರ್ಯಕ್ರಮದಡಿಯಲ್ಲಿ 31 ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಮಾಣಿಕತೆ ಹಾಗೂ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನೀಡುವ ಸಂಸ್ಥೆಯಿದ್ದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ. ಇಂತಹ ಸಂಸ್ಥೆಯಲ್ಲಿ ನೀಡುವ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಸಮಾಜದಲ್ಲಿ ಆದರ್ಶಪ್ರಾಯರಾಗಿ ಬದುಕಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಯುವಜನತೆಗೆ ಸ್ವಉದ್ಯೋಗ ಶಿಕ್ಷಣದಿಂದ ಮೊದಲ್ಗೊಂಡು ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ಮಾಡುವ ಕಾರ್ಯಕ್ರಮಗಳವರೆಗೆ ಕ್ಷೇತ್ರದ ಕಾರ್ಯಕ್ರಮಗಳು ಹಲವಾರು. ಕರ್ನಾಟಕ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಕುಳಿತು ಶಿಕ್ಷಣ ಪಡೆಯುವ ತಂತ್ರಾಂಶ ಯೋಜನೆಯೇ ಈ ಜ್ಞಾನತಾಣ ಕಾರ್ಯಕ್ರಮ. ಅಂತರ್ಜಾಲದ ಮುಖಾಂತರ ತಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳುವ ಸಾಮರ್ಥ್ಯ ಗ್ರಾಮೀಣ ವಿದ್ಯಾರ್ಥಿಗಳಿಗೂ ಒದಗಿ ಬಂದಿದೆ. ಮನೆ ಪಾಠಗಳು ಕಣ್ಮರೆಯಾಗಿ ಮೊಬೈಲ್ ಪಾಠಗಳು ಆಕರ್ಷಣೆಯಾಗಿದೆ. ಆದರೂ ದುರ್ಬಲ ವರ್ಗದ ಕುಟುಂಬದ ಮಕ್ಕಳಿಗೆ ಈ ಸೌಲಭ್ಯವು ಕನಸಿನ ಮಾತಾಗಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ಶ್ರೀಮಂತ ಮತ್ತು ಬಡ ಮಕ್ಕಳ ನಡುವೆ ಅಂತರ್ಜಾಲ ಶಿಕ್ಷಣವೊಂದು ಕಂದರವಾಗಿ ಮೂಡಿ ಬರುತ್ತಿದೆ. ಇದನ್ನು ಗಮನಿಸಿದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಮಕ್ಕಳಲ್ಲಿ ಅಂತರ್ಜಾಲ ಶಿಕ್ಷಣದ ಮಹತ್ವವನ್ನು ತಿಳಿಸಲು ಮಾಡಿದ ಪ್ರಯತ್ನವೇ ಜ್ಞಾನತಾಣ ಕಾರ್ಯಕ್ರಮ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತ್ಯಾಗರಾಜ್ ರವರು ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಸಂಸ್ಥೆಯಲ್ಲಿ ಇಲ್ಲದ ಯೋಜನೆಗಳಿಲ್ಲ. ಈ ಸಂಸ್ಥೆಯ ನೂರಾರು ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಕ್ರಮಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕರಾದ ರವಿ ಕುಮಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಣಕಾಸು ಪ್ರಭಂಧಕರಾದ ಕಿರಣ್ ಆಡಳಿತ ಪ್ರಭಂಧಕಿ ಚೈತ್ರಾ ಮೇಲ್ವಿಚಾರಕಿ ಲಕ್ಷ್ಮಿ, ಕೃಷಿ ಮೇಲ್ವಿಚಾರಕರಾದ ಹರೀಶ್ ಹಾಗೂ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.