Belluti, Sidlaghatta : ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲೂ ಪ್ರತಿ ನಿತ್ಯ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಚಿಕಿತ್ಸಾ ಸೌಕರ್ಯ ಸಿಗಲಿದ್ದು ಸುತ್ತ ಮುತ್ತಲಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯ (ಫೆಸಿಲಿಟೀಸ್ ಮ್ಯಾನೇಜರ್) ಮಂಜುನಾಥರೆಡ್ಡಿ ಹೇಳಿದರು.
ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೆಳ್ಳೂಟಿ ಗೇಟ್‌ನ ರಿಚ್ಮಂಡ್ ಫೆಲೋಷಿಪ್ ಸೊಸೈಟಿ (ಮೂರ್ಚೆ ಮತ್ತು ಮಾನಸಿಕ ಅಸ್ವಸ್ಥರ ಕೇಂದ್ರ) ದಲ್ಲಿ ಬುಧವಾರ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆ ವತಿಯಿಂದ ನಿರ್ಮಿಸಲಾಗಿರುವ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲಾ ಕೇಂದ್ರದ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯ ಸಾಯಿ ಮಧುಸೂಧನ್ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯಲ್ಲಿ ಈ ಭಾಗದ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಶಿಡ್ಲಘಟ್ಟದಿಂದ ಮುದ್ದೇನಹಳ್ಳಿಗೆ ಚಿಕಿತ್ಸೆಗಾಗಿ ಬರಲು ಸಾಧ್ಯವಾಗದ, ಆರ್ಥಿಕವಾಗಿ ಹಿಂದುಳಿದ ಬಡ ಜನರಿಗೂ ಉತ್ತಮ ಚಿಕಿತ್ಸೆ ಸಿಗಬೇಕು ಎನ್ನುವ ದೃಷ್ಟಿಯಿಂದ ಇದೀಗ ಶಿಡ್ಲಘಟ್ಟದಲ್ಲಿಯೂ ಶಾಖೆ ಆರಂಬಿಸಿದ್ದು ಪ್ರತಿನಿತ್ಯ ಇಲ್ಲಿಯೂ ಆರೋಗ್ಯ ತಪಾಸಣೆ ಸೇರದಂತೆ ಉತ್ತಮ ಚಿಕಿತ್ಸೆ ಸಿಗಲಿದೆ. ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎನ್ನುವಂತಹವರನ್ನು ಮುದ್ದೇನಹಳ್ಳಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುವುದು ಎಂದರು.
ತಾಲ್ಲೂಕಿನ ಜನತೆ ಈ ಆಸ್ಪತ್ರೆಯ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಸ್ಪತ್ರೆಗೆ ಬರುವಾಗ ಆಧಾರ್ ಕಾರ್ಡ್‌ಅನ್ನು ಕಡ್ಡಾಯವಾಗಿ ತರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಿಚ್ಮಂಡ್ ಫೆಲೋಷಿಪ್ ಸೊಸೈಟಿಯ ಅಧ್ಯಕ್ಷ ಎನ್.ಶ್ರೀಕಾಂತ್, ಉಪಾಧ್ಯಕ್ಷ ಕೆ.ವಿ.ಅನಂತಪದ್ಮನಾಭ, ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಜಂಟಿ ಕಾರ್ಯದರ್ಶಿ ಬಿ.ವಿ.ಮುನೇಗೌಡ, ನಿರ್ದೇಶಕರಾದ ತಮೀಮ್‌ಅನ್ಸಾರಿ, ಗ್ರಾಮಸ್ಥರಾದ ಮುನಿಕೆಂಪಣ್ಣ, ನಾಗೇಶ್, ಹಿತ್ತಲಹಳ್ಳಿ ಸುರೇಶ್, ಡಾ.ವಾಣಿ, ಸಿಬ್ಬಂದಿ ಶ್ರಾವಣಿ, ಐಟಿ ವಿಒಭಾಗದ ರವಿ ಹಾಜರಿದ್ದರು.