ಸಂಕ್ರಾಂತಿ ಹಬ್ಬದ ಮುನ್ನಾ ದಿನ ಬುಧವಾರ ನಗರದ ಶ್ರೀ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ (ಸುಗ್ಗಿ ಹಬ್ಬ) ಗೋ ಪೂಜೆ, ರಂಗೋಲಿ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಭತ್ತ, ರಾಗಿ, ಧಾನ್ಯಗಳ ರಾಶಿ ಪೂಜೆಯೊಡನೆ ಆರಂಭಗೊಂಡು ಗೋ ಪೂಜೆ ನೆರವೇರಿಸುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷ ಕ ವೃಂದ ದೇಶಿಯ ಉಡುಗೆ, ತೊಡುಗೆ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅತಿಥಿಗಳ ಗಮನಸೆಳೆದರಲ್ಲದೇ ಅಪ್ಪಟ ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಪರಸ್ಪರ ಎಳ್ಳು, ಬೆಲ್ಲ ವಿನಿಮಯದೊಟ್ಟಿಗೆ ಸುಗ್ಗಿಹಬ್ಬ ಸಂಕ್ರಾಂತಿಯನ್ನು ಬರಮಾಡಿಕೊಂಡರು.
ಶಾಲೆಯಲ್ಲಿ ಬೇಯಿಸಿದ ಗೆಣಸು, ಕಡಲೆಕಾಯಿ ಮತ್ತು ಅವರೆಕಾಯಿ ಹಾಗೂ ಪೊಂಗಲ್ ಮಾಡಿಸಿದ್ದು, ಮಕ್ಕಳು, ಪೋಷಕರು, ಶಿಕ್ಷಕರು ಸವಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಶ್ರೀನಿವಾಸಮೂರ್ತಿ ಮತ್ತು ಯೋಗ ಶಿಕ್ಷಕ ಶ್ರೀಕಾಂತ್, ವಿದ್ಯಾರ್ಥಿಗಳು ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ ಇಂತಹ ಹಬ್ಬ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಸಂಸ್ಕೃತಿಯ ಉಳಿವಿಗೆ ಮನವಿ ಮಾಡಿದರು.
ಪ್ರಾಂಶುಪಾಲ ಕೆ.ಪುರುಷೋತ್ತಮ, ಕಿರುತೆರೆನಟ ಮದನ್ ಗೌಡ, ಶಿಕ್ಷಕ ನಾಗರಾಜ್ ಹಾಜರಿದ್ದರು.