Sidlaghatta : ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ಮತ್ತು ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ಸಹಯೋಗದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ಉತ್ಪನ್ನಗಳ ಮಾರಾಟ ಮೇಳ ಹಾಗೂ ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ದಿನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ ಮಾತನಾಡಿ, ಸ್ವ-ಸಹಾಯ ಗುಂಪಿನ ಮಹಿಳೆಯರು ತಾವು ತಯಾರಿಸುವ ಉತ್ಪನ್ನಗಳು ಸಾಮಾನ್ಯರಿಗೂ ಸಹ ಕೈಗೆಟುಕುವಂತಹ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸ್ವ-ಸಹಾಯ ಗುಂಪುಗಳು ಮತ್ತು ಸ್ವಯಂ ಉದ್ಯೋಗ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳ ಸಾಂಸ್ಥಿಕ ಹಣಕಾಸು ಸೇರಿದಂತೆ ನೀತಿ ರಚನೆ ಮತ್ತು ಸಮನ್ವಯ ಮಾಡಬೇಕು. ಗ್ರಾಮೀಣ ಮಹಿಳೆಯರ ಬದುಕಿನ ದಿಕ್ಕನ್ನು ಬದಲಾಯಿಸುವಲ್ಲಿ ಹಾಗೂ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶವನ್ನಿರಿಸಿಕೊಂಡಿರುವ ಸ್ವಸಹಾಯ ಸಂಘಗಳಿಂದ ಗ್ರಾಮಗಳ ಉದ್ಧಾರವೇ ಆಗಿವೆ. ಅದೇ ರೀತಿಯಾಗಿ ಸ್ವಾವಲಂಬನೆಯ ಜೀವನಕ್ಕೆ ಅಡಿಪಾಯ ಹಾಕುತ್ತ ಬೆಳೆಯಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ, ತಾಲ್ಲೂಕು ಪಂಚಾಯಿತಿ ಶಿಡ್ಲಘಟ್ಟ ಇವರ ಸಹಯೋಗದೊಂದಿಗೆ ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಇಡಲಾಗಿತ್ತು. ಸ್ವ-ಸಹಾಯ ಸಂಘದವರು ತಯಾರಿಸುವ ಉತ್ಪನ್ನಗಳು ಸಾಮಾನ್ಯರಿಗೂ ಸಹ ಲಭಿಸುವಂತೆ ಸಂಘದ ಮಹಿಳೆಯರು ತಯಾರಿಸಿದ ಪದಾರ್ಥಗಳನ್ನು ಮಾರಾಟ ಮಳಿಗೆಗಳಲ್ಲಿ ಲಭ್ಯವಿತ್ತು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ,ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ನೌತಾಜ್, ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಪ್ರಸಾದ್, ತಾಲ್ಲೂಕು ಸಂಯೋಜಕರಾದ ಲತಾ, ನಟೇಶ್, ಕಾರ್ಯಕ್ರಮ ವ್ಯವಸ್ಥಾಪಕ ವಿಜಯ್ ಕುಮಾರ್, ವಲಯ ಮೇಲ್ವಿಚಾರಕ ಬಾಲರಾಜ.ಕೆ, ನರಸಿಂಹ ಸಿ.ಎನ್, ನಳಿನಿ ಡಿ.ಇ.ಒ, ಭಾಗ್ಯಲಕ್ಷ್ಮಿ ಬಿ.ಆರ್.ಪಿ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.