ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೋಡಿ ಹರಿದ ಹಾಗೂ ಕೆರೆ ಕಟ್ಟೆ ಒಡೆದ ಕೆರೆಗಳಿಗೆ ಸೋಮವಾರ ಭೇಟಿ ನೀಡಿ ಅಲ್ಲಿನ ಬೆಳೆ ನಷ್ಟವನ್ನು ವೀಕ್ಷಿಸಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
ಕೆರೆ ಕಟ್ಟೆ ಒಡೆದಿರುವುದನ್ನು ದುರಸ್ತಿ ಮಾಡಲು ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಅದಕ್ಕಾಗಿ ಇನ್ನೂ ಒಂದೆರಡು ತಿಂಗಳು ತಡ ಆಗಲಿದೆ. ಅದಕ್ಕಾಗಿ ಕೆರೆ ಕಟ್ಟೆಯಿಂದ 30 ಮೀಟರ್ ದೂರದಲ್ಲಿ ತಡೆಗೋಡೆಯನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರದಿಂದಲೆ ಭರಿಸಲಾಗುವುದು ಎಂದು ತಿಳಿಸಿದರು.
ನಂತರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಾದ ಮೇಲೆ ಕಟ್ಟೆಯ ದುರಸ್ಥಿ ಕಾರ‍್ಯ ನಡೆಯಲಿದೆ ಎಂದ ಅವರು ಕೆರೆಕಟ್ಟೆಯೊಡೆದು ನೀರು ನುಗ್ಗಿದ್ದರಿಂದ ಆಗಿರುವ ಬೆಳೆ ನಷ್ಟ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದರು.
ಪ್ರತಿ ಗ್ರಾಮ ಪಂಚಾಯಿತಿಗೂ 50 ಲಕ್ಷದಿಂದ ಒಂದು ಕೋಟಿ ರೂ.ತನಕ ಅನುದಾನವನ್ನು ಪಕ್ಷಾತೀತವಾಗಿ ನೀಡಲಾಗುತ್ತಿದೆ. ಇದರಿಂದ ಕುಡಿಯುವ ನೀರು, ರಸ್ತೆ, ಚರಂಡಿ, ನೈರ್ಮಲ್ಯದಂತ ಮೂಲ ಸೌಕರ‍್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಅಗ್ರಹಾರ, ಆನೆಮಡಗು, ತಿಮ್ಮನಾಯಕನಹಳ್ಳಿ, ದಿಬ್ಬೂರಹಳ್ಳಿ ಸೇರಿದಂತೆ ಕೋಡಿಹರಿದ ಹಾಗೂ ಕೆರೆಕಟ್ಟೆಯೊಡೆದ ಕೆರೆಗಳ ಅಚ್ಚುಕಟ್ಟಿಗೆ ಭೇಟಿ ನೀಡಿ ಸ್ಥಳೀಯರ ಹಾಗೂ ರೈತರ ಅಹವಾಲು ಆಲಿಸಿದರು. ಬಾಗಿನ ಸಲ್ಲಿಸಿದರು.
ತಹಶೀಲ್ದಾರ್ ಎಸ್.ರಾಜೀವ್, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಗೋವಿಂದು ಹಾಜರಿದ್ದರು.