ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಬೀದಿ ಬದಿ ವ್ಯಾಪಾರಿಗಳಿಗೆ ಹಣ್ಣು, ಬಿಸ್ಕತ್ ಮತ್ತು ಎನ್ 95 ಮಾಸ್ಕ್ ಗಳನ್ನು ವಿತರಿಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮನೆಮನೆಗೂ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮಾರುವ ಮೂಲಕ ಕೊರೊನಾ ಮಹಾಮಾರಿಯನ್ನು ತಡೆಯುವ ವಾರಿಯರ್ಸ್ ರೀತಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ರಾಜ್ಯ ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ತಲಾ ಎರಡು ಸಾವಿರ ರೂಗಳ ಸಹಾಯಧನ ಘೋಷಿಸಲಾಗಿದೆ. ಹಲವಾರು ರೀತಿಯಲ್ಲಿ ಸಮಾಜದ ವಿವಿಧ ಸ್ತರಗಳ ವ್ಯಕ್ತಿಗಳು ತೊಂದರೆಗೊಳಗಾದ ಈ ರೀತಿಯ ಸಂದಿಗ್ದ ಪರಿಸ್ಥಿತಿಯಲ್ಲಿ ಪರಸ್ಪರ ನೆರವಾಗುವುದು, ಕೃತಜ್ಞತೆ ಸಲ್ಲಿಸುವುದನ್ನು ಮಾಡಬೇಕಿದೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀರಾಮ್, ಉಪಾಧ್ಯಕ್ಷ ಕೆ.ಎಸ್.ಗೋಪಾಲ್, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ಬಿಜೆಪಿ ಮುಖಂಡರಾದ ಮುಖೇಶ್, ಮಲ್ಲಣ್ಣ, ಗಿರಿಧರ್, ಲಕ್ಷ್ಮೀನಾರಾಯಣಪ್ಪ ಹಾಜರಿದ್ದರು.