ಪವಿತ್ರ ಉಪವಾಸ ವ್ರತದ ರಂಜಾನ್ ಹಬ್ಬವನ್ನು ಶುಕ್ರವಾರ ತಾಲ್ಲೂಕಿನ ಮುಸ್ಲಿಂ ಸಮುದಾಯವರು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದರು.
ಕಳೆದ ವರ್ಷದಂತೆ ಈ ಬಾರಿಯೂ ಲಾಕ್‌ಡೌನ್ ಕರಿನೆರಳು ರಂಜಾನ್ ಹಬ್ಬದ ಆಚರಣೆಯ ಮೇಲೆ ಬಿದ್ದಿದೆ. ಮೇ 12ಕ್ಕೆ ಮುಕ್ತಾಯವಾಗಬೇಕಿದ್ದ ಕರ್ಫ್ಯೂ ಸರ್ಕಾರದ ಪರಿಷ್ಕೃತ ಆದೇಶದಂತೆ ಮೇ 24ರ ವರೆಗೆ ಇರುವುದರಿಂದ ಹೊಸ ಬಟ್ಟೆ, ಸಿಹಿ ತಿನಿಸುಗಳ ಖರೀದಿಗೆ ಅವಕಾಶವಿಲ್ಲದಂತಾಗಿದೆ.
ಕಳೆದ ಬಾರಿಯೂ ಕೋವಿಡ್ ಕಾರಣದಿಂದ ಮನೆಯಲ್ಲಿ ಸರಳವಾಗಿ ನಮಾಜ್ ಮಾಡಲಾಗಿತ್ತು. ಈ ಬಾರಿಯೂ ಕೋವಿಡ್ ಎರಡನೇ ಅಲೆಯ ಪರಿಣಾಮ ಮೌಲ್ವಿಯವರು ಮಾತ್ರ ಮಸೀದಿಗೆ ತೆರಳಿ ನಮಾಜ್ ಮಾಡಲು ಅವಕಾಶವಿದ್ದು, ಉಳಿದವರೆಲ್ಲ ಮನೆಗಳಲ್ಲೇ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ಕೆಲವರು ಮಾತ್ರ ಮೊದಲೇ ಚಿಕ್ಕಮಕ್ಕಳಿಗೆ ಬಟ್ಟೆ ಖರೀದಿಸಿದ್ದರು. ಆದರೆ, ದೊಡ್ಡವರು ಖರೀದಿ ಮಾಡಲು ಅವಕಾಶವೇ ಇಲ್ಲದಂತಾಗಿದೆ. ಹಬ್ಬಕ್ಕಾಗಿ ಬಟ್ಟೆ ತಂದ ವ್ಯಾಪಾರಿಗಳಿಗೂ ಅಂಗಡಿ ಬಾಗಿಲು ಹಾಕಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
“ಈಗ ಕೋವಿಡ್ ಕಾರಣದಿಂದ ಮಸೀದಿಗೆ ತೆರಳದೇ ಮನೆಯಲ್ಲಿ ನಮಾಜ್ ಮಾಡಲಾಗುತ್ತಿದೆ. ಅಲ್ಲದೆ ಪ್ರತಿಯೊಬ್ಬ ಮುಸ್ಲಿಮನು ತಮಗಿರುವುದನ್ನು ಇನ್ನೊಬ್ಬರಿಗೆ ದಾನ ಮಾಡುವುದು ಕಡ್ಡಾಯವಾಗಿದೆ. ಇದು ಎಲ್ಲಕ್ಕಿಂತ ಶ್ರೇಷ್ಠವಾಗಿದೆ” ಎಂದು ಮೌಲ್ವಿಯೊಬ್ಬರು ತಿಳಿಸಿದರು.