ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅತಿ ದೊಡ್ಡದಾದ ಕೆರೆ ಹಾಗೂ ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ಕೆರೆ ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆಯು ಶನಿವಾರ ಕೋಡಿ ಹರಿದಿದೆ.
ತಾಲ್ಲೂಕಿನ ಉತ್ತರ ಭಾಗದಲ್ಲಿ ಬೆಟ್ಟ ಗುಟ್ಟಗಳ ಸಾಲಿನ ನಡುವೆ ಸಾಕಷ್ಟು ಕೆರೆಗಳಿದ್ದು ಅವುಗಳ ಪೈಕಿ ತಲಕಾಯಲಬೆಟ್ಟದ ವೆಂಕಟೇಶ್ವರಸಾಗರ ಹಾಗೂ ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆ ಹೊರತುಪಡಿಸಿ ಮಿಕ್ಕೆಲ್ಲವೂ ಸಣ್ಣ ಪುಟ್ಟ ಕೆರೆಗಳೆ.
ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಬಿದ್ದ ಮಳೆಗೆ ಸಾಕಷ್ಟು ಸಣ್ಣ ಪುಟ್ಟ ಕೆರೆಗಳು ಕೋಡಿ ಹರಿದಿದ್ದವಾದರೂ ದೊಡ್ಡ ಕೆರೆಗಳ ಪೈಕಿ ಒಂದಾದ ತಲಕಾಯಲಬೆಟ್ಟದ ವೆಂಕಟೇಶ್ವರಸಾಗರ ಮೊನ್ನೆ ಕೋಡಿ ಹರಿದಿದ್ದು ರಾಮಸಮುದ್ರ ಕೆರೆ ಶನಿವಾರ ಕೋಡಿ ಹರಿದಿದೆ.
ಮೈಸೂರು ಸಂಸ್ಥಾನದ ಜಯಚಾಮರಾಜ್ ಒಡೆಯರ್‌ರ ಕಾಲದಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಸುಮಾರು 130 ವರ್ಷಗಳ ಹಿಂದೆ ನಿರ್ಮಿಸಿದ್ದ, ರಾಮಸಮುದ್ರ ಕೆರೆಯು ಸುಮಾರು 900 ಎಕರೆಯಷ್ಟು ಅಚ್ಚುಕಟ್ಟನ್ನು ಹೊಂದಿದೆ.
ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರದ ಗಡಿಯ ಅಚ್ಚುಕಟ್ಟು ಪ್ರದೇಶವನ್ನು ಹಂಚಿಕೊಂಡ ಈ ಕೆರೆಯ 800 ಎಕರೆಯಷ್ಟು ಅಚ್ಚುಕಟ್ಟು ಶಿಡ್ಲಘಟ್ಟ ತಾಲ್ಲೂಕಿನಲ್ಲಿದ್ದರೆ ಉಳಿದ 100 ಎಕರೆಯಷ್ಟು ಅಚ್ಚುಕಟ್ಟು ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಅಷ್ಟು ವಿಸ್ತಾರವಾದ ಈ ಕೆರೆ ಸುತ್ತ ಮುತ್ತಲ ಏಳೂರಿನ ಗ್ರಾಮಸ್ಥರಿಗೆ ಜೀವನಾಡಿಯಾಗಿದೆ.
ರಾಮಸಮುದ್ರ ಕೆರೆ ಅಭಿವೃದ್ಧಿ ಮತ್ತು ನಿರ್ವಹಣೆಯ ಉಪ ಸಮಿತಿಯ ಅಧ್ಯಕ್ಷೆ ಸುನಂದಮ್ಮವಿಜಯಕುಮಾರ್, ಕಾರ‍್ಯದರ್ಶಿ ಡಿ.ವಿ.ಪ್ರಸಾದ್, ಅಚ್ಚುಕಟ್ಟುದಾರ ರೈತರು, ಗ್ರಾಮಸ್ಥರು ಕೋಡಿ ಹರಿದ ಸ್ಥಳದಲ್ಲಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi