Sidlaghatta : ಕರ್ನಾಟಕ ರಾಜ್ಯ ರೈತ ಸಂಘದ (Karnataka Rajya Raita Sangha) ವತಿಯಿಂದ ಮಂಗಳವಾರ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಇರುವ ರಾಜನುಕುಂಟೆಯ ಪಶು ಆಹಾರ ಉತ್ಪಾದನಾ ಘಟಕ ಮುಂದೆ ಅನಿರ್ದಿಷ್ಟ ಅವಧಿ ಸತ್ಯಾಗ್ರಹದಲ್ಲಿ ಭಾಗವಹಿಸಲು ಹೊರಡುವ ಮುನ್ನ ನಗರದ ಬಸ್ ನಿಲ್ದಾಣದ ಬಳಿ ಮಾನವ ಸರಪಣಿ ರೂಪಿಸಿ ರಸ್ತೆ ತಡೆ ನಡೆಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಮಾತನಾಡಿ, ಶಿಡ್ಲಘಟ್ಟದಿಂದ ಅನೇಕ ರೈತರು ಮುಷ್ಕರದಲ್ಲಿ ಭಾಗವಹಿಸಲು ಹೊರಟಿದ್ದೇವೆ. ಪಶು ಆಹಾರದ ಬೆಲೆ ಹೆಚ್ಚಿಸಲಾಗಿದೆ ಆದರೆ ಹಾಲಿನ ದರ ಏಕೆ ಏರಿಸಿಲ್ಲ. ಕಚ್ಚಾ ವಸ್ತುಗಳ ದರ ಹೆಚ್ಚಾಗಿರುವುದರಿಂದ ಪಶು ಆಹಾರದ ಬೆಲೆ ಹೆಚ್ಚಿಸುತ್ತಿದ್ದೇವೆ ಎನ್ನುತ್ತಾರೆ. ಹಾಲು ಫೀಡ್, ಬೂಸ, ಔಷಧಿಗಳ ದರ ಏರಿದೆ, ಹಸುಗಳಿಗೆ ಇತ್ತೀಚಿಗೆ ಬೊಬ್ಬೆ ರೋಗ ಬೇರೆ ಕಾಣಿಸಿಕೊಂಡು ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಕಷ್ಟಕ್ಕೆ ಬಾರದೆ ವಿನಾಕಾರಣ ದರಗಳು ಹೆಚ್ಚಿಸುವುದನ್ನು ಖಂಡಿಸಿ ಹಾಲಿನ ದರ ಏರಿಸಿ ಪಶು ಆಹಾರ ಇಳಿಸುವ ಸಲುವಾಗಿ ಅನಿರ್ದಿಷ್ಟ ವಧಿ ಸತ್ಯಾಗ್ರಹ ಭಾಗವಹಿಸಲು ಹೊರಟಿದ್ದೇವೆ ಎಂದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ವೇಣುಗೋಪಾಲ್, ನಗರ ಘಟಕದ ಅಧ್ಯಕ್ಷ ಬಿ, ನಾರಾಯಣಸ್ವಾಮಿ, ದೇವರಾಜ್, ಕೃಷ್ಣಪ್ಪ, ಸೋಣ್ಣೇನಹಳ್ಳಿ ಕೆಂಪ ರೆಡ್ಡಿ ಹಾಜರಿದ್ದರು.