Sidlaghatta : ಪಕ್ಷದಿಂದ ಅಮಾನತ್ತು ಮಾಡಿದ್ದರೂ ಸಹ ಪುಟ್ಟು ಆಂಜಿನಪ್ಪ ಅವರು ಕಾಂಗ್ರೆಸ್ ಪಕ್ಷದ ಚಿನ್ಹೆ, ಮುಖಂಡರ ಭಾವಚಿತ್ರಗಳನ್ನು ಫ್ಲೆಕ್ಸ್‌ಗಳಲ್ಲಿ ಬಳಸಿ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಅವರು ದೂರಿದ್ದಾರೆ.
ಈ ಬಗ್ಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ಪತ್ರ ಬರೆದಿರುವ ರಾಜೀವ್‌ಗೌಡ ಅವರು, ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಪುಟ್ಟು ಆಂಜಿನಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಚುನಾವಣೆಗೆ ಟಿಕೇಟ್ ಆಕಾಂಕ್ಷಿ ಆಗಿದ್ದ ಪುಟ್ಟು ಆಂಜಿನಪ್ಪ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನನ್ನ ವಿರುದ್ದ ಬಂಡಾಯವಾಗಿ ಸೆಣಿಸಿ ನನ್ನ ಸೋಲಿಗೂ ಅವರು ಕಾರಣಕರ್ತರಾಗಿದ್ದಾರೆ. ಇದನ್ನು ಪರಿಗಣಿಸಿ ಅವರನ್ನು ನೀವು ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಸರಿ.
ಆದರೂ ಅವರು ಪಕ್ಷದ ಮುಖಂಡರ ಭಾವಚಿತ್ರಗಳನ್ನು, ಪಕ್ಷದ ಧ್ವಜ ಚಿನ್ಹೆಯನ್ನು ಬಳಸಿಕೊಂಡು ಫ್ಲೆಕ್ಸ್‌ಗಳನ್ನು ಹಾಕುವುದು, ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡುವಂತ ಕೆಲಸಗಳನ್ನು ಮುಂದುವರೆಸಿದ್ದಾರೆ.
ಇದು ಕಾರ್ಯಕರ್ತರಲ್ಲಿ ಇನ್ನಿಲ್ಲದ ಗೊಂದಲಗಳನ್ನು ಸೃಷ್ಟಿಸುತ್ತದೆಯಲ್ಲದೆ, ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿಸ್ಥಳೀಯ ಚುನಾವಣೆಗಳ ಮೇಲೆ ಪ್ರಭಾವ ಬೀರಿ ಪಕ್ಷ ಇನ್ನಷ್ಟು ಸೋಲಲು ಕಾರಣವಾಗಬಹುದು ಎಂಬುದು ನನ್ನ ಆತಂಕವಾಗಿದೆ.
ಹಾಗಾಗಿ ಪಕ್ಷದಿಂದ ಉಚ್ಚಾಟಿಸಿದ್ದರೂ ಪಕ್ಷದ ಚಿನ್ಹೆ, ನಾಯಕರ ಫೋಟೋ ಬಳಸಿಕೊಂಡು ಗೊಂದಲ ಮೂಡಿಸುತ್ತಿರುವ ಪುಟ್ಟು ಆಂಜಿನಪ್ಪ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನಾನು ಮನವಿ ಮಾಡುತ್ತೇನೆಂದು ರಾಜೀವ್‌ಗೌಡ ಅವರು ರೆಹಮಾನ್ ಖಾನ್‌ಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.