Home News ಬಗರ್‌ಹುಕುಂ ಸಾಗುವಳಿ ವಿಚಾರವಾಗಿ ಸಭೆ ನಡೆಸಲು ಜನಪ್ರತಿನಿಧಿಗಳ ನಿರ್ಲಕ್ಷ್ಯ

ಬಗರ್‌ಹುಕುಂ ಸಾಗುವಳಿ ವಿಚಾರವಾಗಿ ಸಭೆ ನಡೆಸಲು ಜನಪ್ರತಿನಿಧಿಗಳ ನಿರ್ಲಕ್ಷ್ಯ

0
Raita Sangha Hasiru Sene Protest

ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ರೈತ ಸಂಘದ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ನಡೆಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಅವರು ಮಾತನಾಡಿದರು.

ರಾಜ್ಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿಯೂ ಬಗರ್‌ಹುಕುಂ ಸಾಗುವಳಿ ವಿಚಾರವಾಗಿ ಸಭೆಗಳನ್ನು ನಡೆಸಿ ಅರ್ಹ ರೈತರಿಗೆ ಸಾಗುವಳಿ ಪತ್ರಗಳನ್ನು ನೀಡುವ ಕೆಲಸ ಆಗುತ್ತಿದೆಯಾದರೂ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬಗರ್‌ಹುಕುಂ ಸಾಗುವಳಿ ವಿಚಾರವಾಗಿ ಯಾವುದೇ ಸಭೆ ನಡೆಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಂಡ್ರಹಳ್ಳಿ ಗ್ರಾಮದಲ್ಲಿ ಬಹುತೇಕ ರೈತರು ಕಳೆದ ಹಲವಾರು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರಾದರೂ ಸಾಗುವಳಿ ಪತ್ರ ಪಡೆಯಲು ಅರಣ್ಯ ಇಲಾಖೆಯಿಂದ ಬೇಕಾಗಿರುವ ಎನ್‌ಓಸಿ ಗಾಗಿ ಹೋದರೆ ಅರಣ್ಯ ಇಲಾಖೆ ಸಿಬ್ಬಂದಿ ವಿನಾಕಾರಣ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕೆಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಉಳುಮೆ ಮಾಡುತ್ತಿರುವ ರೈತನಿಗೆ ಜಮೀನನ್ನು ಸಕ್ರಮಗೊಳಿಸಿ ಅವರಿಗೆ ಸಾಗುವಳಿ ಪತ್ರ ವಿತರಿಸಬೇಕಾದ ಅಧಿಕಾರಿಗಳು ವಿನಾಕಾರಣ ರೈತರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು. ಪೆನ್ನು, ಪೇಪರ್ ಇದೆ ಅಂದ ಮಾತ್ರಕ್ಕೆ ನಿಮಗಿಷ್ಟ ಬಂದ ಹಾಗೆ ಬೆರೆದುಕೊಂಡರೆ ಆಗುತ್ತದೆಯೇ ಎಂದ ಅವರು, ಕೂಡಲೇ ಬಗರ್‌ಹುಕುಂ ಸಾಗುವಳಿ ವಿಚಾರವಾಗಿ ಸಭೆ ಕರೆದು ಅರ್ಹ ರೈತರಿಗೆ ಸಾಗುವಳಿ ಪತ್ರ ವಿತರಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ತಾಲ್ಲೂಕಿನ ಸುಂಡ್ರಹಳ್ಳಿ ಗ್ರಾಮದ ವಿವಾಧಿತ ಜಮೀನಿಗೆ ಸಂಬಂಧಿಸಿದಂತೆ ಸ್ಥಳ ವೀಕ್ಷಣೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬರುತ್ತಿದ್ದು ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡೋಣ ಎಂದು ಹೇಳಿ ಪ್ರತಿಭಟನಾಕಾರರನ್ನು ಸುಂಡ್ರಹಳ್ಳಿಗೆ ಬರುವಂತೆ ಸೂಚಿಸಿದಾಗ ರೈತ ಸಂಘದ ಪದಾಧಿಕಾರಿಗಳು ಸುಂಡ್ರಹಳ್ಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸುಂಡ್ರಹಳ್ಳಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಭೇಟಿ :

ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಿರುವ ಸುಂಡ್ರಹಳ್ಳಿ ಗ್ರಾಮಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಡೀಮ್ಡ್ ಫಾರೆಸ್ಟ್ ಎಂದು ಗುರುತಿಸುವ ಕೆಲಸ ಇದೊಂದೇ ತಾಲ್ಲೂಕಿನಲ್ಲಿ ನಡೆದಿಲ್ಲ, ಬದಲಿಗೆ ರಾಜ್ಯಾದ್ಯಂತ ನಿರಂತರವಾಗಿ ನಡೆಯುತ್ತಿದೆ. ಕೃಷಿಗಾಗಿ ಅರಣ್ಯ ಭೂಮಿಯನ್ನು ವಶಪಡಿಸಿಕೊಂಡಿರುವ ರೈತರನ್ನು ಒಕ್ಕಲೆಬ್ಬಿಸುವುದನ್ನು ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಎಂಬ ವಿಷಯ ಪತ್ರಿಕೆಗಳ ಮೂಲಕ ತಿಳಿದುಕೊಂಡಿದ್ದು, ಈವರೆಗೂ ಯವುದೇ ಆದೇಶ ಬಂದಿಲ್ಲ. ನಾವು ಸರ್ಕಾರಿ ಅಧಿಕಾರಿಗಳು ಸರ್ಕಾರದ ಆದೇಶದ ಅನ್ವಯ ಕೆಲಸ ಮಾಡಬೇಕಾಗಿರುತ್ತದೆ. ಹಾಗಾಗಿ ಮುಂಬರುವ ಮೇ 18 ರ ಬುಧವಾರ ತಹಶೀಲ್ದಾರ್ ನೇತೃತ್ವದಲ್ಲಿ ರೈತ ಮುಖಂಡರ ಸಭೆ ಕರೆದು ರೈತರ ಬಳಿಯಿರುವ ಹಾಗೂ ಇಲಾಖೆಯ ಬಳಿಯಿರುವ ಎಲ್ಲಾ ದಾಖಲೆಗಳನ್ನು ಪರೀಶೀಲನೆ ನಡೆಸಿ ಕ್ರಮ ಜರುಗಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ವಲಯ ಅರಣ್ಯಾಧಿಕಾರಿ ದಿವ್ಯಾ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ರೈತ ಮುಖಂಡರಾದ ವೆಂಕಟರೋಣಸ್ವಾಮಿ, ಬೀರಪ್ಪ, ದೇವರಾಜ್, ಗೋಪಾಲ್, ಕಿಶೋರ್, ಕೆಂಪಣ್ಣ, ಮಂಜುನಾಥ್, ನಾಗರಾಜ್, ಕೃಷ್ಣಪ್ಪ, ನಾರಾಯಣಸ್ವಾಮಿ, ವಾಸು, ಕಿಶನ್, ಆಂಜಿನಪ್ಪ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version