Home Culture ಮಳೆಯನ್ನು ಪೂಜಿಸುವ ಹಳ್ಳಿ ಸಂಪ್ರದಾಯ “ಅತ್ತೆಮಳೆ ಹೊಂಗಲು” ಪೂಜೆ

ಮಳೆಯನ್ನು ಪೂಜಿಸುವ ಹಳ್ಳಿ ಸಂಪ್ರದಾಯ “ಅತ್ತೆಮಳೆ ಹೊಂಗಲು” ಪೂಜೆ

0
Rain diety Atte Male Pooja Village Native Culture

K Muttukadahalli, Sidlaghatta : ನದಿ ನಾಲೆಯ ನೀರನ್ನು ಕಾಣದ ಬಯಲುಸೀಮೆಯ ಜನರು ಮಳೆಯನ್ನು ನಂಬಿದವರು. ಹಾಗಾಗಿ ಮಳೆರಾಯನನ್ನು ವಿವಿಧ ರೀತಿಯಲ್ಲಿ ಪೂಜಿಸುವುದು ವಾಡಿಕೆ.

ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಮಳೆರಾಯನ ಪೂಜೆಯ ಒಂದು ವಿಧವಾದ “ಅತ್ತೆಮಳೆ ಹೊಂಗಲು” ಪೂಜೆಯನ್ನು ಗ್ರಾಮಸ್ಥರೆಲ್ಲಾ ಸೇರಿ ವಿಶೇಷವಾಗಿ ಆಚರಿಸಿದರು. ಸಾಮಾನ್ಯವಾಗಿ ಮೊರಸುವಕ್ಕಲಿಗ ಸಮುದಾಯದ ಮುಂದಾಳತ್ವದಲ್ಲಿ ಆಚರಿಸಲ್ಪಡುವ ಒಂದು ಕೃಷಿಸಂಬಂಧೀ ಹಬ್ಬವಿದು.

ಮಳೆ ಬೆಳೆ ಚೆನ್ನಾಗಿ ಆಗಿ ಜನ, ಜಾನುವಾರಗಳಿಗೆ ಯಾವುದೇ ರೀತಿಯ ರೋಗ ರುಜಿನಗಳು ಬಾರದಿರಲೆಂದು ಹಲವಾರು ಸಂಪ್ರದಾಯಗಳನ್ನು ಹಳ್ಳಿಗಳಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಹಲವು ಸಂಪ್ರದಾಯಗಳಲ್ಲಿ ಅತ್ತೆಮಳೆ ಹೊಂಗಲು ಪೂಜೆಯೂ ಒಂದು. ಹದಿನೈದು ದಿನಕ್ಕೊಮ್ಮೆಯಂತೆ ಮಳೆ ಹೆಸರು ಬದಲಾಗುತ್ತದೆ.

ರೇವತಿಯಿಂದ ಪ್ರಾರಂಭವಾಗಿ ಜೇಷ್ಠ ಮಳೆಗೆ ಕೊನೆಯಾಗುತ್ತದೆ. ಪಿತೃಪಕ್ಷದಲ್ಲಿ ಬರುವ ಮಳೆಯೇ ಅತ್ತೆ ಮಳೆ. ಈ ಮಳೆಯು ಪ್ರಾರಂಭವಾದ ದಿನದಿಂದ ಕೊನೆಯಾಗುವ ವೇಳೆಗೆ ಯಾವುದಾದರೂ ಒಂದು ಶುಕ್ರವಾರ ಅಥವಾ ಮಂಗಳವಾರ ದಿನ ಅತ್ತೆಮ್ಮನ ಅಂಗಳ ಪೂಜೆ ಮಾಡುವುದು ಇಲ್ಲಿನ ವಾಡಿಕೆಯಾಗಿದೆ.

“ಕರೇಬಂಟನ ಕತೆ ಇದಕ್ಕೆ ಮೂಲ. ಕರೇಬಂಟನ ಹೆಂಡತಿ ಒಬ್ಬ ರಾಕ್ಷಸಿ ಎಂಬುದು ಆತನಿಗೆ ತಡವಾಗಿ ತಿಳಿಯುತ್ತದೆ. ಅವಳಿಂದ ತಪ್ಪಿಸಿಕೊಂಡು ಅವನು ಊರೂರು ಅಲೆದರೂ ಬಿಡದೆ ಹಿಂದೆ ಬೀಳುತ್ತಾಳೆ. ಇವರ ವಿಷಯ ತಿಳಿಯದ ಪಂಚಾಯತಿದಾರರು, “ಗಂಡಹೆಂಡತಿ ಅಂದ್ಮೇಲೆ ಜಗಳ ಸಾಮಾನ್ಯ, ಈದಿನ ರಾತ್ರಿ ಚಾವಡಿಯಲ್ಲಿರಿ, ಬೆಳಿಗ್ಗೆ ತೀರ್ಮಾನ ಹೇಳೋಣ” ಎಂದರು.

ರಾತ್ರಿ ಅವಳು ಕರೇಬಂಟನನ್ನು ತಿಂದುಹಾಕಿ ಗವಾಕ್ಷಿ ಮೂಲಕ ಬೆಂಕಿಕೊಳ್ಳಿಯ ರೂಪದಲ್ಲಿ ಆಕಾಶಕ್ಕೆ ಹೋಗಿಬಿಡ್ತಾಳೆ. ಬೆಳಗ್ಗೆ ಊರಿನ ಹಿರಿಯರಿಗೆ ನಡೆದ ಕತೆ ಅರ್ಥವಾಗುತ್ತೆ. ಕರೇಬಂಟನ ಮಾತು ಕೇಳದೆ ಅವನ ಸಾವಿಗೆ ಕಾರಣರಾಗಿದ್ದಕ್ಕೆ ಅವರೆಲ್ಲಾ ಪಶ್ಚಾತ್ತಾಪ ಪಡುತ್ತಾರೆ.

ಅಂದಿನಿಂದ ಅವನ ನೆನಪಲ್ಲಿ ಅತ್ತೆಮಳೆಯ ಒಂದು ಮಂಗಳವಾರ ಅಥವಾ ಶುಕ್ರವಾರ ಹೊಂಗಲು ಆಚರಣೆ ಮಾಡಿಕೊಂಡು ಬಂದಿದ್ದಾರೆ” ಎಂದು ಡಿ.ಎನ್.ಸುದರ್ಶನರೆಡ್ಡಿ ವಿವರಿಸಿದರು.

“ಕುಂಬಾರರ ಆವೆಯಿಂದ ಬೂದಿ ತಂದು ಅದಕ್ಕೆ ಮರಿಹೊಡೆದ ರಕ್ತ ಬೆರೆಸಿ ಸರಹದ್ದಿನವರೆಗೂ ಜಮೀನಿನ ಎಲ್ಲ ಬೆಳೆಗಳ ಮೇಲೂ ಚರಗ ಚಲ್ಲಿಕೊಂಡು ಬರ್ತಾರೆ. ಲಕ್ಕಿರಿ ಕಡ್ಡಿ, ಬೂದಿ ತಗೊಂಡುಹೋಗಿ ತಮ್ಮತಮ್ಮ ಜಮೀನುಗಳ ಹತ್ತಿರ ನಾವು ಕರೇಬಂಟ, ಅವನ ಹೆಂಡತಿ ಮತ್ತು ಅವನ ಮಗುವಿನ ಚಿತ್ರವನ್ನು ಬರೆದು ಬರುತ್ತಾರೆ.

ಈ ಬೂದಿ , ಲಕ್ಕಿರಿಕಡ್ಡಿ ತರುವ , ಹಂಚುವ ಕೆಲಸ ಚರಗ ಚಲ್ಲುವ ಕೆಲಸ ಊರ ತೋಟಿಯ ಜವಾಬ್ದಾರಿ ಆಗಿರುತ್ತದೆ. ಆತನಿಗೆ ತಲಾ ಇಂತಿಷ್ಟು “ಓಲಿ” ಕೊಡಬೇಕು ಮತ್ತು ಬೆಳೆ ಆದಾಗ “ಮ್ಯಾರೆ” ಕೊಡಬೇಕು.

ಗೌಡರ ಮಾರ್ಗದರ್ಶನದಲ್ಲಿ ಇದೆಲ್ಲಾ ನಡೆಯುತ್ತದೆ. ಓಲಿ ಕಾಸುಗಳಲ್ಲೇ “ಮರಿ” ತರಬೇಕು. “ಗುಡ್ಡೇಬಾಡು” ಬೇಕು ಅಂದವರು ಹೆಚ್ಚುವರಿ ಹಣ ಕೊಡಬೇಕು” ಎಂದು ಅವರು ಹೇಳಿದರು.

ಕೆ.ಮುತ್ತುಕದಹಳ್ಳಿಯಲ್ಲಿ ಕುಂಬಾರರ ಮನೆಯಿಂದ ಒಲೆ ಬೂದಿಯನ್ನ ತಂದು ಊರು ಬಾಗಿಲ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಪೂಜೆಮಾಡಿ ಕುರಿ ಬಲಿ ನೀಡಿದ ನಂತರ ಕತ್ತರಿಸಿದ ಹಸಿರು ರಾಗಿ ಹುಲ್ಲು, ಅವರೆ ಸೊಪ್ಪು, ಜೋಳದ ರೆಕ್ಕೆಗಳನ್ನ ಕುರಿಯ ರಕ್ತದಲ್ಲಿ ಬೆರಸಿ ಆ ಹುಲ್ಲನ್ನು ಊರಿನ ಸುತ್ತಲೂ ಗಸ್ತು ಹಾಕಲಾಯಿತು.

ಪೂಜೆ ನಂತರ ಬೂದಿಯನ್ನ ಗ್ರಾಮದ ಪ್ರತಿಯೊಬ್ಬರೂ ತೆಗೆದುಕೊಂಡು ಹೋಗಿ ತಮ್ಮ ತಮ್ಮ ಜಮೀನುಗಳ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಬಂದರು. ಇದರಿಂದ ಮಳೆ ಚೆನ್ನಾಗಿ ಬಿದ್ದು ಸಮೃದ್ಧವಾದ ಬೆಳೆಯಾಗಿ, ಜನ, ಜಾನುವಾರಗಳು ರೋಗ ರುಜಿನಗಳಿಲ್ಲದಂತೆ ನಾಡು ಸುಭಿಕ್ಷವಾಗುತ್ತದೆ ಎಂಬುದು ಅವರ ನಂಬಿಕೆ.

ಗ್ರಾಮಸ್ಥರಾದ ನಾರಾಯಣಪ್ಪ, ನಾಗರಾಜ್, ರಾಮ, ಅಶ್ವತಪ್ಪ, ಕೇಶವ, ವೆಂಕಟೇಶಪ್ಪ, ಚನ್ನರಾಯಪ್ಪ, ನಾಗೇಶ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version