ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಶಾಲೆಯ ಮೇಲೆ ಟಾರ್ಪಾಲ್ ಹೊದಿಸಿ, ಮಳೆ ನೀರು ಸೋರದ ಹಾಗೆ ವ್ಯವಸ್ಥೆ ಮಾಡುವುದನ್ನು ವೀಕ್ಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ಮಾತನಾಡಿದರು.
ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ, ಈಗಾಗಲೇ ಎರಡು ದಿನಗಳು ರಜೆ ಘೋಷಿಸಿದ್ದು, ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ಹಾನಿಯಾದ ಕೊಠಡಿಗಳ ದುರಸ್ತಿ ಮಾಡಿಸಲಾಗುತ್ತದೆ. ಮಕ್ಕಳ ಪಾಠ ಪ್ರವಚನ ನಿಲ್ಲದ ಹಾಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ತಾಲ್ಲೂಕಿನಾದ್ಯಂತ ಇರುವ 267 ಸರ್ಕಾರಿ ಶಾಲೆಗಳಲ್ಲಿನ 933 ಕೊಠಡಿಗಳಲ್ಲಿ ಸುಮಾರು 500 ಕೊಠಡಿಗಳು ಹಾನಿಗೊಳಗಾಗಿವೆ. ಅವುಗಳಲ್ಲಿ ತೀರಾ ಹೆಚ್ಚಾಗಿ ಹಾನಿಗೊಳಗಾಗಿರುವ 66 ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದೇ ಪರ್ಯಾಯ ವ್ಯವಸ್ಥೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೀಗೇ ಸುರಿಯುತ್ತಿದ್ದರೂ ಕೂಡ ಪಾಠ ಪ್ರವಚನಗಳಿಗೆ ತೊಂದರೆಯಾಗದ ಹಾಗೆ ಮತ್ತು ತೊಂದರೆ ಅಥವಾ ಅವಘಡಗಳು ಸಂಭವಿಸದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಸಂಬಂಧವಾಗಿ ಎಲ್ಲಾ ಮುಖ್ಯಶಿಕ್ಷಕರಿಗೂ ಸಿ.ಆರ್.ಪಿ ಗಳಿಗೂ ಅಗತ್ಯ ಮಾಹಿತಿ ನೀಡಲಾಗಿದೆ ಎಂದರು.
ಮಕ್ಕಳನ್ನು ಬಯಲಿನಲ್ಲಿ ಕೂರಿಸದೇ ಆರೋಗ್ಯಪೂರ್ಣ ವಾತಾವರಣದಲ್ಲಿ ಕಲಿಕೆಯನ್ನು ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.