Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಶುಕ್ರವಾರ ಮಳೆಗಾಗಿ ಮಳೆರಾಯನ ಪೂಜೆಯು ನಡೆಯಿತು. ಗ್ರಾಮದ ಪುರಾತನ ಶ್ರೀ ಗಂಗಾದೇವಿ ಅಮ್ಮನವರ ದೇವಸ್ಥಾನದ ಹಿಂಬಾಗದ “ಗೊಡ್ಡುಕಲ್ಲು” ಗಳಿಗೆ ಪೂಜಿಸಿ ನೀರನ್ನು ಎರೆಯುವರು.
ಸುಮಾರು ಮೂರು ದಿನ ನಡೆಯುವ ಈ ಆಚರಣೆಯಲ್ಲಿ ಮಳೆರಾಯನ ಹೊತ್ತ ವ್ಯಕ್ತಿ ಹಾಗೂ ಮಳೆರಾಯನಿಗೆ ಪ್ರಾರಂಭ ದಿನದ ಪೂಜೆಯೊಂದಿಗೆ ಪ್ರತಿ ದಿನ ಸಂಜೆ ಮೂರು ದಿನಗಳ ನೀರೆರೆದು ಪೂಜಿಸುವುದು ಪದ್ಧತಿಯಿದೆ.
ಬಯಲುಸೀಮೆಯ ಈ ಆಚರಣೆಯನ್ನು ಮಳೆ ಬರದೆ ಬೆಳೆ ಒಣಗಿದಾಗ ಆಚರಿಸುವುದು ವಾಡಿಕೆ. ಈ ಸಮಯದಲ್ಲಿ ನಮ್ಮ ಜನಪದರು ಭಕ್ತಿಯಿಂದ ಮಳೆರಾಯನನ್ನು ಆರಾಧಿಸುತ್ತಾರೆ.
ಗ್ರಾಮಸ್ಥರೆಲ್ಲಾ ಒಗ್ಗೂಡಿ, ಹಿರಿಯರು ಹಾಗೂ ಹುಡುಗರೆಲ್ಲ ಸೇರಿ ಕೆರೆ ಕಟ್ಟೆಯ ಹತ್ತಿರ ಹೋಗಿ ಜೇಡಿಮಣ್ಣಿನಿಂದ ಗೊಂಬೆಯೊಂದನ್ನು ತಯಾರಿಸಿ ತರುತ್ತಾರೆ ಅದನ್ನು ಹಲಗೆ ಮೇಲಿಡುತ್ತಾರೆ. ಒಬ್ಬ ಹುಡುಗನು ಅಥವಾ ಹಿರಿಯರೊಬ್ಬರ ತಲೆ ಮೇಲೆ ಪ್ರತಿನಿತ್ಯ ಸಂಜೆ ಸಮಯ ಹೊರಿಸಿಕೊಂಡು ಮಳೆರಾಯನ ಕುರಿತು ಹಾಡುಗಳನ್ನು ಹೇಳುತ್ತಾ, ಸಿಳ್ಳೆ ಹಾಕುತ್ತಾ ಮನೆಮನೆಗಳ ಮುಂದೆ ಹೋಗುತ್ತಾರೆ ಆಗ ಮಹಿಳೆಯರು, ಮಕ್ಕಳು ಅರಿಶಿನ, ಕುಂಕುಮ, ಹೂ ಇಟ್ಟು ಭಕ್ತಿಯಿಂದ ಪೂಜಿಸಿ, ರಾಗಿ, ಅಕ್ಕಿ, ಬೇಳೆ, ಬೆಲ್ಲ, ಹಣವನ್ನು ಕಾಣಿಕೆಯಾಗಿ ಕೊಟ್ಟು ಮಳೆರಾಯನ ಗೊಂಬೆ ಹೊತ್ತ ಹುಡುಗನ ಮೇಲೆ ತಣ್ಣೀರನ್ನು ಸಂಪೂರ್ಣ ಒದ್ದೆಯಾಗುವರೆಗೂ ಸುರಿಯುತ್ತಾರೆ.
ಮೂರು ದಿನಗಳ ಕಾಲ ನಡೆಯುವ ಈ ಪೂಜೆಯನ್ನು ಮಾಡಿದ ನಂತರ ಮಳೆ ಬಂದೇ ತೀರುತ್ತದೆಂಬ ಅಚಲವಾದ ನಂಬಿಕೆ ಗ್ರಾಮೀಣರದ್ದು. ಮಳೆರಾಯನನ್ನು ನೆನಪಿಸುವ ಕನ್ನಡ ಹಾಗು ತೆಲುಗು ಪದಗಳನ್ನು ರಾಗ ಹಾಗೂ ಲಯಬದ್ಧವಾಗಿ ಹಾಡುತ್ತಾ ಗುಂಪುಗೂಡಿ ರೈತರು, ಮಕ್ಕಳು ಮನೆಮನೆಗೂ ಹೋಗುತ್ತಾರೆ. ಪ್ರತಿ ಮನೆಯವರೂ ಹಸಿಟ್ಟನ್ನು ನೀಡುತ್ತಾರೆ.
ಮಳೆರಾಯನ ಮೆರವಣಿಗೆ, ಪೂಜೆ ವಿಧಾನಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ರೂಢಿಸಿಕೊಂಡಿರುತ್ತಾರೆ. ರೈತರ ಬದುಕಿಗೆ ಜೀವಾಳವಾದ ಮಳೆಯನ್ನು, ಗ್ರಾಮೀಣರು ದೈವವೆಂದೇ ಪರಿಗಣಿಸಿದ್ದಾರೆ. ಸಕಾಲದಲ್ಲಿ ಮಳೆಯಾದರೆ ಬೆಳೆ, ಬೆಳೆಯಾದರೆ ಬದುಕು. ಆದರೆ ಮಳೆಗಾಲ ಬಂದರೂ, ಮಳೆಬಾರದೇ ಹೋದರೆ ಕಂಗಾಲಾದ ರೈತರು ಮಳೆರಾಯನಿಗೆ ಮೊರೆಹೋಗುತ್ತಾರೆ.
ಕೃಷಿಯನ್ನೇ ನಂಬಿರುವ ಗ್ರಾಮೀಣರು ಅದಕ್ಕಾಗಿ ಕೆಲವು ಆಚರಣೆಗಳನ್ನು ಮಾಡುವುದುಂಟು ಈ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳಿದ್ದು ವೈವಿಧ್ಯಮಯವಾಗಿರುತ್ತದೆ.
ಬಾರೋ ಬಾರೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲ, ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ ಎಂದು ಹಾಡುತ್ತಾ ಮೇಲೂರಿನ ಗ್ರಾಮಸ್ಥರು, ಕಂಬದಹಳ್ಳಿ ಮತ್ತು ಗಂಗನಹಳ್ಳಿಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಮಳೆಗಾಗಿ ಪ್ರಾರ್ಥಿಸಿ, ಮಳ್ಳೂರಿನ ಕೆರೆಯಲ್ಲಿ ಮಳೆರಾಯನನ್ನು ವಿಸರ್ಜನೆ ಮಾಡಿದರು.
ಗ್ರಾಮದ ಸುಬ್ರಮಣಿ ಮಳೆರಾಯನನ್ನು ತಲೆಯ ಮೇಲೆ ಹೊತ್ತುಕೊಂಡಿದ್ದರೆ, ಗ್ರಾಮಸ್ಥರಾದ ನಾರಾಯಣಪ್ಪ, ರಮೇಶ್, ಪ್ರದೀಪ್, ಮಂಜುನಾಥ್, ಹನುಮಂತಪ್ಪ, ಶ್ರೀರಾಮ ಭಕ್ತ ಮಂಡಳಿಯ ನಾರಾಯಣಸ್ವಾಮಿ ವೃಂದದವರಿಂದ ಭಜನೆ ನಡೆಯಿತು.