Home News ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ – ಸಚಿವ ಡಾ.ಕೆ.ಸುಧಾಕರ್

ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ – ಸಚಿವ ಡಾ.ಕೆ.ಸುಧಾಕರ್

0
Sidlaghatta Rain House Damage Dr K Sudhakar Health Minister Inspection

ಶಿಡ್ಲಘಟ್ಟ ನಗರದಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ಕೆರೆ-ಕುಂಟೆಗಳು ಭರ್ತಿಯಾಗಿ ಕೋಡಿ ಹರಿದಿವೆ. ಅತಿವೃಷ್ಟಿಯಿಂದ ಬೆಳೆ ನಷ್ಟ ಹೊಂದಿರುವ ಕುರಿತು ಈಗಾಗಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪ್ರಸ್ತುತ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಕುರಿತು ಅಂದಾಜು ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಅದನ್ನು ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟವನ್ನು ಈಗಾಗಲೇ ಅಂದಾಜಿಸಲಾಗಿದೆ. ಜೊತೆಗೆ ಮಳೆಯಿಂದ ಸಂಪೂರ್ಣವಾಗಿ ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ 5 ಲಕ್ಷ ರೂಗಳ ವೆಚ್ಚದಲ್ಲಿ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

 ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂಪೂರ್ಣವಾಗಿ ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ 5 ಲಕ್ಷ ರೂಗಳ ನೆರವು ನೀಡಿ ಪುನರ್ವಸತಿ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಭಾಗಶಃ ಹಾನಿಯಾಗಿರುವ ಮನೆಗಳನ್ನು ಗುರುತಿಸಿ 5 ಸಾವಿರದಿಂದ 1 ಲಕ್ಷ ರೂಗಳ ವರೆಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

 ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 213 ಮನೆಗಳು ಸಂಪೂರ್ಣವಾಗಿ ಹಾಳಾಗಿದೆ. ಜೊತೆಗೆ 340 ಮನೆಗಳು ಭಾಗಶಃ ಹಾನಿಯಾಗಿವೆ. ಒಟ್ಟು 540ಕ್ಕೂ ಅಧಿಕ ಮನೆಗಳು ಹಾನಿಯಾಗಿದ್ದು, ಕೂಡಲೇ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ವರದಿಗಳನ್ನು ಸಮಗ್ರವಾಗಿ ಸಿದ್ಧಪಡಿಸಿ ತ್ವರಿತವಾಗಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅಗ್ರಹಾರ ಕೆರೆ ಒಡೆದು ಹೋಗಿದ್ದು ಅದನ್ನು ಪುನರ್ ನಿರ್ಮಾಣ ಮಾಡಲು ಸುಮಾರು 3 ಕೋಟಿ ರೂಗಳ ಅಗತ್ಯವಿದೆ. ಈಗಾಗಲೇ ಡಿಪಿಆರ್ ಸಿದ್ದಪಡಿಸಲಾಗಿದೆ. ಕಾಮಗಾರಿಯನ್ನು ಅತಿಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

 ತಾಲ್ಲೂಕಿನಲ್ಲಿ ಮಳೆಯಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ತಲುಪಿಸುವ ಉದ್ದೇಶದಿಂದ ಈಗಾಗಲೇ ಎಸ್ ಡಿ ಆರ್ ಎಫ್ ತಂಡ ಮತ್ತು ಅಗ್ನಿಶಾಮಕ ದಳದ ತಂಡ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ನಿರಾಶ್ರಿತರಿಗೆ ತಾತ್ಕಾಲಿಕವಾಗಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಸಂದರ್ಭದಲ್ಲಿ ಜನರ ಮಾರ್ಗದರ್ಶನ ಮತ್ತು ಸಹಾಯಕ್ಕಾಗಿ ಕಂಟ್ರೋಲ್ ರೂಮ್ ಮತ್ತು ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

 ನಗರದ ಕುರುಬರಪೇಟೆ ಹಾಗೂ ಸಿದ್ಧಾರ್ಥ ನಗರದಲ್ಲಿ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಹಾನಿಯಾಗಿರುವ ಮನೆಗಳನ್ನು ವೀಕ್ಷಿಸಿದರು.

 ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ರಾಜಣ್ಣ, ತಹಶೀಲ್ದಾರ್ ಬಿ.ಎಸ್.ರಾಜೀವ್, ಶಿಡ್ಲಘಟ್ಟ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಶಿಡ್ಲಘಟ್ಟ ಗ್ರಾಮಂತರ ಬಿಜೆಪಿ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ, ನಗರಸಭೆಯ ಸದಸ್ಯರಾದ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಅನಿಲ್ ಕುಮಾರ್, ಮಂಜುನಾಥ್ ಹಾಜರಿದ್ದರು.  

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version