ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯ ಬಳಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿದೆ. ಅಷ್ಟಿಷ್ಟಲ್ಲ ಜನರಸೊಂಟ ಪೂರ್ತಿ ಮುಳುಗುವಷ್ಟು ಎದೆಮಟ್ಟದವರೆಗೂ ನೀರು. ಹೊಲ ಗದ್ದೆ ತೋಟಕ್ಕೆ ಯೂರಿಯಾ ಮೂಟೆ ಸಾಗಿಸೋಕೆ ಕಷ್ಟ, ಹಿಪ್ಪು ನೇರಳೆ ಸೊಪ್ಪನ್ನು ಮನೆಗೆ ತರೋಕೂ ಪರದಾಟವಾಗಿದೆ.
ಈ ಭಾಗದ ರೈತರು ಹೊಲ ಗದ್ದೆ ತೋಟಗಳಿಗೆ ಹೋಗೋಕೆ ಇರೋದು ಇದೊಂದೆ ಮಾರ್ಗ. ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ತಲದುಮ್ಮನಹಳ್ಳಿ ಬಳಿ ಇರುವ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆಗಾಲದಲ್ಲಿ ನೀರು ತುಂಬಿಬಿಡುತ್ತದೆ. ಅಲ್ಲಿನ ನೀರು ಎಲ್ಲೂ ಹರಿದು ಹೋಗಲು ಜಾಗ ಮಾಡದ ಕಾರಣ ಅಂಡರ್‌ಪಾಸ್‌ನಲ್ಲಿ ಎದೆ ಮಟ್ಟಕ್ಕೆ ನೀರು ನಿಂತು ಅಲ್ಲಿ ಯಾರೂ ಓಡಾಡಲು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ತಲದುಮ್ಮನಹಳ್ಳಿಯ ಸಾಕಷ್ಟು ರೈತರ ಹೊಲ ಗದ್ದೆಗಳಿಗೆ ಹೋಗಲು ಈ ಅಂಡರ್‌ಪಾಸ್‌ನ ಮೂಲಕವೇ ಸಾಗಬೇಕಿದೆ. ಅಲ್ಲಿ ನೀರು ತುಂಬಿದಾಗ ಹೊಲ ಗದ್ದೆ ತೋಟಗಳಿಗೆ ತೆರಳಲು ಆಗುವುದಿಲ್ಲವಾದ್ದರಿಂದ ರಸಗೊಬ್ಬರ ತಿಪ್ಪೆ ಗೊಬ್ಬರ ಸಾಗಿಸಲು ಆಗೊಲ್ಲ ಸೊಪ್ಪು ಸದೆ ಹೂ ತರಕಾರಿಯನ್ನು ತರಲೂ ಆಗೊಲ್ಲ.
ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ರೈಲ್ವೆ ಅಂಡರ್‌ಪಾಸ್‌ನ ಬಳಿ ನೀರು ನಿಲ್ಲದಂತೆ ಮಾಡಿ ಎಂದು ಗ್ರಾಮಸ್ಥರು ಈಗಾಗಲೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಗ್ರಾಮಸ್ಥರೆ ಮೋಟಾರ್ ಇಟ್ಟು ಅಲ್ಲಿನ ನೀರನ್ನು ಖಾಲಿ ಮಾಡಿ ಬೇಸತ್ತಿದ್ದಾರೆ.
ಬೆಳೆದ ಬೆಳೆಗೆ ಇಲ್ಲದೆ ಬೇಸತ್ತಿರುವ ರೈತರು ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತು ಎದುರಾಗಿರುವ ಸಮಸ್ಯೆಗಳಿಂದ ಇನ್ನಷ್ಟು ಹೈರಾಣಾಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಮುಂದಾಗಬೇಕಿದೆ.