ಶಿಡ್ಲಘಟ್ಟ ನಗರದ ಹಳೇ ಕೆನರಾ ಬ್ಯಾಂಕ್ ಮುಂಭಾಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಶನಿವಾರ ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರ, ನಾರಾಯಣ ನೇತ್ರಾಲಯ ಸಹಯೋಗದಲ್ಲಿ ನೇತ್ರದಾನ ನೋಂದಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಎಲ್. ಅನಿಲ್ ಕುಮಾರ್, ನಟ ಪುನೀತ್ ರಾಜ್‌ಕುಮಾರ್ ದೇಹ ಮಣ್ಣಲ್ಲಿ ಮಣ್ಣಾಗಿರಬಹುದು. ಆದರೆ ಅಪ್ಪು ಎರಡು ನೇತ್ರಗಳು ನಾಲ್ಕು ಜೀವಕ್ಕೆ ಬೆಳಕು ನೀಡಿವೆ. ಡಾ. ರಾಜ್ ಕುಮಾರ್ ಅವರ ಹಾದಿಯಂತೆ ಪುನೀತ್ ದಾನ ಮಾಡಿದ ಎರಡು ಕಣ್ಣುಗಳಿಂದ ನಾರಾಯಣ ನೇತ್ರಾಲಯ ನಾಲ್ವರು ದೃಷ್ಟಿ ವಿಕಲಚೇತನರಿಗೆ ಬೆಳಕು ಕೊಡಿಸಿದೆ. ನಟ ಪುನೀತ್ ನಾಲ್ವರ ಕಣ್ಣಲ್ಲಿ ಇರಲಿದ್ದಾರೆ. ಅವರ ಒಳ್ಳೆಯ ಗುಣಗಳನ್ನು ನಾವೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ನಂತರ ನೇತ್ರ ದಾನ ಮಾಡಲು ನೋಂದಣಿ ಪತ್ರಕ್ಕೆ ಸಹಿ ಹಾಕೋಣ ಎಂದು ತಿಳಿಸಿದರು.
ಡಾ. ರಾಜ್ ಕುಮಾರ್ ಇಡೀ ಕುಟುಂಬ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. 2006 ರಲ್ಲಿ ಡಾ. ರಾಜ್ ಕುಮಾರ್ ಅವರು ಎರಡು ಕಣ್ಣು ದಾನ ಮಾಡಿದ್ದರು. 2017 ರಲ್ಲಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ನೇತ್ರ ದಾನ ಮಾಡಿದ್ದರು. ಇದೀಗ ಪುನೀತ್ ರಾಜ್ ಕುಮಾರ್ ತಮ್ಮ ಎರಡು ಕಣ್ಣು ದಾನ ಮಾಡಿದ್ದು, ಇಡೀ ಕುಟುಂಬದ ನೇತ್ರದಾನ ಕಾರ್ಯ ಶ್ಲಾಘನೀಯ. ಅವರಿಂದ ಪ್ರೇರಿತರಾಗಿ ಮತ್ತು ಪುನೀತ್ ಅವರ ನೆನಪಿಗಾಗಿ ನೇತ್ರದಾನ ನೋಂದಣೆ ಕಾರ್ಯಕ್ರಮವನ್ನು ತಾಲ್ಲೂಕಿನ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಹೆಚ್ಚು ಹೆಚ್ಚು ಜನರು ಬಂದು ನೇತ್ರದಾನ ನೋಂದಣೆ ಮಾಡಿಸಿ, ಒಬ್ಬರ ಕಣ್ಣು ದಾನದಿಂದ ನಾಲ್ಕು ಜನರಿಗೆ ಕಣ್ಣು ಕಾಣುವಂತೆ ಮಾಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಆಶಾ ಕಿರಣ ಅಂಧ ಮಕ್ಕಳಿಂದ ನೇತ್ರದಾನ ನೋಂದಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪುನೀತ್ ರಾಜ್ ಕುಮಾರ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಸುಮಾರು 700 ಕ್ಕೂ ಹೆಚ್ಚು ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದರು.
ನಾರಾಯಣ ನೇತ್ರಾಲಯದ ಮಧು, ಶಿರಸ್ತೆದಾರ್ ಮಂಜುನಾಥ್, ನಗರ ಸಭೆ ಸದಸ್ಯರಾದ ಎಲ್.ಅನಿಲ್ ಕುಮಾರ್, ಕೃಷ್ಣಮೂರ್ತಿ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಾಜರಿದ್ದರು.