
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ವಾಭಿಮಾನ ಸಮಾಜ ಮನಸ್ಕರ ವೇದಿಕೆ ವತಿಯಿಂದ ತಹಶೀಲ್ದಾರ್ ಬಿ.ಎಸ್.ರಾಜೀವ್ ಅವರಿಗೆ ಮನವಿ ನೀಡಲಾಯಿತು.
ನಗರ ಹಾಗೂ ತಾಲ್ಲೂಕಿನಾದ್ಯಂತ ಸಾರಿಗೆ ಬಸ್ ಅವ್ಯವಸ್ಥೆ, ಹದಗೆಟ್ಟ ರಸ್ತೆಗಳು, ರೈತರ ಕೃಷಿಗೆ ಸಂಬಂಧಿಸಿದ ವಸ್ತುಗಳು ಹಾಗೂ ಕುರಿ ಮೇಕೆ ಕಳ್ಳತನಗಳು, ಕಳಪೆ ಕಾಮಗಾರಿಗಳಿಂದ ಆಗುತ್ತಿರುವ ಅಪಘಾತಗಳು, ಅವೈಜ್ಞಾನಿಕ ಒಳ ಚರಂಡಿ ಮ್ಯಾನ್ ಹೊಲ್, ಸಂಪೂರ್ಣ ಹದಗೆಟ್ಟ ಬೈಪಾಸ್ ರಸ್ತೆ, ನಗರದಲ್ಲಿ ಶೌಚಾಲಯಗಳಿಲ್ಲ, ಬೀದಿ ದೀಪಗಳಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಅವ್ಯವಸ್ಥೆ, ತಾಲ್ಲೂಕು ಕಚೇರಿಯಲ್ಲಿ ಸಮಯಕ್ಕೆ ಕೆಲಸಗಳಾಗದೆ ರೈತರು, ಸಾರ್ವಜನಿಕರು ಪರದಾಡುತ್ತಿದ್ದು, ಜನ ಬೇಸತ್ತಿರುವ ಹಿನ್ನಲೆಯಲ್ಲಿ ತಾಲ್ಲೂಕಿನ ಪ್ರತಿ ಇಲಾಖೆಯ ಅಧಿಕಾರಿಗಳು ನಮ್ಮೋಂದಿಗೆ ಒಂದು ಸಭೆ ಆಯೋಜನೆ ಮಾಡಲು ಮನವಿ ನೀಡಲಾಯಿತು.
ತಾಲ್ಲೂಕಿನ ದಂಡಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ನಗರ ಹಾಗೂ ತಾಲ್ಲೂಕಿನ ಸಮಸ್ಯೆಗಳನ್ನು ಬಗೆಹರಿಸಲು ಸಭೆ ಆಯೋಜನೆ ಮಾಡುವಂತೆ ತಹಶೀಲ್ದಾರ್ ರಾಜೀವ್ ರವರಿಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ್ ರಾಜೀವ್ ಮನವಿ ಸ್ವೀಕರಿಸಿ, ಮೂರು ದಿನಗಳ ಗಡುವು ನೀಡಿ ಎಲ್ಲರೊಂದಿಗೆ ಚರ್ಚೆ ಮಾಡಿ ಒಂದು ದಿನಾಂಕ ನೀಡುತ್ತೇನೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಪದಾಧಿಕಾರಿಗಳಾದ ಕೋಟೆ ಚನ್ನೇಗೌಡ, ರವಿಪ್ರಕಾಶ್, ಮಾರುತಿ, ವೆಂಕಟರೆಡ್ಡಿ, ಶಂಕರ್ ನಾರಾಯಣ, ಭಕ್ತರಹಳ್ಳಿ ಕೃಷ್ಣಪ್ಪ, ಗೋಪಾಲ್ ರೆಡ್ಡಿ, ಮನೋಜ್ ಗೌಡ, ನಾಗರಾಜ್, ಸ್ವಾಭಿಮಾನ ಸಮಾನ ಮಸ್ಕರ ವೇದಿಕೆ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ಪ್ರಭಾಕರ್, ವಿಸ್ಡಂ ನಾಗರಾಜ್, ರೈತ ಸಂಘದ ಮಂಜುನಾಥ್, ಅಶ್ವಥ್. ಎರ್ರಪ್ಪ ಹಾಜರಿದ್ದರು.