ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯಲ್ಲಿ ಬುದವಾರ ಸಾಮೂಹಿಕ ಆಸ್ತಿಗಳ ಸಾಪ್ತಾಹಿಕ ಆಚರಣೆಯ ಕಾರ್ಯಕ್ರಮದಲ್ಲಿ ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಉಪ ಯೋಜನಾಧಿಕಾರಿ ಆಗಟಮಡಕ ರಮೇಶ್ ಮಾತನಾಡಿದರು.
ಹುಟ್ಟಿದಾಗಿನಿಂದ ಸಾಯುವರೆಗೂ ನಾವುಗಳು ಪ್ರತಿ ದಿನ, ಪ್ರತಿ ಕ್ಷಣ ಸಾಮೂಹಿಕ ಆಸ್ತಿಗಳನ್ನು ಬಳಸುತ್ತಲೇ ಜೀವನ ನಡೆಸುತ್ತಿದ್ದೇವೆ. ಹಾಗಾಗಿ ಅವುಗಳ ರಕ್ಷಣೆ ಹಾಗೂ ನಿರ್ವಹಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಅವರು ತಿಳಿಸಿದರು.
ಇಡೀ ವಿಶ್ವದಾದ್ಯಂತ ಅಕ್ಟೋಬರ್ 02 ರಿಂದ 10 ರವರೆಗೆ ಒಂದು ವಾರದ ಕಾಲ ಸಾಮೂಹಿಕ ಆಸ್ತಿಗಳ ಸಾಪ್ತಾಹಿಕ ನಡೆಯುತ್ತಿದೆ. ಎಫ್ಇಎಸ್ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಮುದಾಯಕ್ಕೆ ಗ್ರಾಮೀಣ ಬಾಗದಲ್ಲಿರುವ ಸಾಮೂಹಿಕ ಆಸ್ತಿಗಳ ವೀಕ್ಷಣೆ, ಮಕ್ಕಳಿಗೆ ಸಾಮೂಹಿಕ ಆಸ್ತಿಗಳ ಕುರಿತು ತಿಳಿಸಿಕೊಡುವುದು, ಸಂಪನ್ಮೂಲ ನಕ್ಷೆಯನ್ನು ಸಮುದಾಯವರಿಂದ ತಯಾರಿಸುವ ಮೂಲಕ ಅವುಗಳ ಸ್ಥಿತಿಗತಿ ಕಡೆ ಗಮನ ಹರಿಸಲಾಗುತ್ತಿದೆ.
ಗ್ರಾಮೀಣ ಭಾಗದ ಸಾಮೂಹಿಕ ಆಸ್ತಿಗಳನ್ನು ಗ್ರಾಮ ಪಂಚಾಯಿತಿಯ ಆಸ್ತಿ ವಹಿಯಲ್ಲಿ ನಮೂದಿಸಿ ಈ ಆಸ್ತಿಗಳನ್ನು ಉಳಿಸಿ ಅಭಿವೃದ್ದಿ ಪಡಿಸುವ ಗುರುತರವಾದ ಜವಾಬ್ದರಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ. ನಾವು ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಕೆರೆ, ಕುಂಟೆ, ಅರಣ್ಯ, ಸ್ಮಶಾನ, ರಾಜ ಕಾಲುವೆ ಮತ್ತು ಪೋಷಕ ಕಾಲುವೆಗಳಾದ ಜಲ ಮೂಲಗಳನ್ನು ಮನ ಬಂದಂತೆ ಬಳಸಿ ಒತ್ತುವರಿ ಮಾಡುತ್ತಾ ನಾಶ ಪಡಿಸುತ್ತಿದ್ದೇವೆ. ನಾವೆಲ್ಲರೂ ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ನಮ್ಮ ಸುತ್ತಮುತ್ತಲಿರುವ ನೈಸರ್ಗಿಕ ಸಂಪನ್ಮೂಲಗಳಾದ ಗಿಡ, ಮರ, ಗೋಮಾಳ, ಗುಂಡುತೋಪು, ಕೆರೆ, ಕುಂಟೆ, ಅರಣ್ಯ, ಸ್ಮಶಾನ, ರಾಜ ಕಾಲುವೆ ಮತ್ತು ಪೋಷಕ ಕಾಲುವೆಗಳನ್ನು ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಮಾಡುವುದರ ಮೂಲಕ ನಮ್ಮ ಜೀವನಾಧಾರಗಳನ್ನು ಬಲಪಡಿಸಿಕೊಳಬೇಕಾಗಿರುವುದು ತುಂಬಾ ಅನಿವಾರ್ಯವಾಗಿದೆ ಎಂದರು.
ಗ್ರಾಮ ಪಂಚಾಯಿತಿಯವರಿಗೆ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳ ಮೂಲಕ ಸಹಕಾರ ನೀಡಲು ಎಫ್ಇಎಸ್ ಸಂಸ್ಥೆ ಅಭಿವೃದ್ದಿ ಪಡಿಸಿದ ಸಿಎಲ್ಎಮ್ ಅಪ್ಲಿಕೇಷನ್ ನ ಮೂಲಕ ಪ್ರಸ್ತುತವಿರುವ ಸಾಮೂಹಿಕ ಆಸ್ತಿಗಳ ಗ್ರಾಮದ ಸಮುದಾಯ ಜೊತೆ ಸೇರಿ ನಕ್ಷೀಕರಣಗಳನ್ನು ಮಾಡಿ ಗ್ರಾಮ ಪಂಚಾಯಿತಿಯ ಆಸ್ತಿ ವಹಿಯಲ್ಲಿ ನಮೂದಿಸಲು ಸಹಕಾರ ನೀಡಲಾಗುತ್ತಿದೆ ಎಂದರು.
ಎಲ್ ಮುತ್ತಕದಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ ಮಾತನಾಡಿ, ಇಲ್ಲಿನ ಕೆರೆಯು ಹರಳಹಳ್ಳಿ, ಎಲ್ ಮುತ್ತಕದಹಳ್ಳಿ ಮತ್ತು ಕುರಬಚ್ಚಪಡೆ ಮೂರು ಗ್ರಾಮಗಳಿಗೆ ಸೇರಿದ್ದು ನಮ್ಮೆಲ್ಲರ ಜೀವನೋಪಾಯದ ಜೀವನಾಡಿಯಾಗಿದೆ. ಆದರೆ ಇಂದು ನಮ್ಮೆಲ್ಲರ ತಾತ್ಸಾರದಿಂದ ಕೆರೆಯಂಗಳದ ಬಹುತೇಕ ಭಾಗವು ಒತ್ತುವರಿಯಾಗಿದೆ. ಸುಮಾರು ಜನರು ಕುರಿ, ಮೇಕೆ ಹಾಗೂ ಹಸು ಸಾಕಾಣಿಕೆಯ ಮೇಲೆ ಆಧಾರಪಟ್ಟಿದ್ದು, ಅಮ್ಮನಕೆರೆಯ ಅಂಗಳದಲ್ಲಿ ಇಷ್ಟು ದಿನ ಮೇಯಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಈ ಅಮ್ಮನ ಕೆರೆಗೆ ಎಚ್ ಎನ್ ವ್ಯಾಲಿ ನೀರು ಬರುವ ಕಾರಣದಿಂದ ಕೆರೆಯ ಸುತ್ತಲೂ ಬದುವನ್ನು ನಿರ್ಮಿಸಿದ್ದು ನಮ್ಮ ಭಾಗದ ಜನರು ಜಾನುವಾರುಗಳನ್ನು ಮೇಯಿಸಲು ಹೋಗಲು ಸಾದ್ಯವಾಗದೇ ತುಂಬಾ ತೊಂದರೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕೆರೆಯನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಒತ್ತುವರಿಯನ್ನು ಬಿಡಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೆಕಾಗಿದೆ ಎಂದು ತಿಳಿಸಿದರು.
ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಕೆರೆ, ಕುಂಟೆ, ಅರಣ್ಯ, ಸ್ಮಶಾನ, ರಾಜ ಕಾಲುವೆ ಮತ್ತು ಪೋಷಕ ಕಾಲುವೆಗಳಾದ ಜಲ ಮೂಲಗಳನ್ನು ಉಳಿಸಿ, ಅಭಿವೃದ್ಧಿ ಪಡಿಸುವುದರ ಜೊತೆಗೆ ನಿರ್ವಹಣೆ ಮಾಡುವುದರ ಕುರಿತು ಎಲ್ಲರೂ ಸೇರಿ ಪ್ರತಿಜ್ಞೆಯನ್ನು ಮಾಡಲಾಯಿತು.
ನಾರಾಯಣಪ್ಪ, ಹರಳಹಳ್ಳಿ ಮುನಿಯಪ್ಪ ಹಾಗೂ ಗ್ರಾಮ ಪರಿಸರ ಅಭಿವೃದ್ದಿ ಸಮಿತಿಯ ಸದಸ್ಯರಾದ ಮಂಜುನಾಥ್, ಮಹೇಶ್, ವಸಂತ್, ನಾಗರಾಜು ಹಾಗೂ ಪಂಚಾಯಿತಿ ಸಂಪನ್ಮೂಲ ವ್ಯಕ್ತಿಯಾದ ವಿ.ಎಲ್. ಮಧು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi