News

21 ದಿನಗಳೊಳಗೆ ಪ್ರಜಾಸೇವಾ ಆಂದೋಲನ ಅರ್ಜಿ ವಿಲೇವಾರಿ: ತಹಶೀಲ್ದಾರ್

Tahsildar Gaganasindhu addressing a press conference on Prajaseva Andolana application disposal, Sidlaghatta taluk office

Sidlaghatta : ತಾಲ್ಲೂಕಿನಲ್ಲಿ ನಡೆಯುತ್ತಿರುವ “ಪ್ರಜಾ ಸೇವೆ ಆಂದೋಲನ”ದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ನಿಯಮಾನುಸಾರ 21 ದಿನಗಳೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಗಗನಸಿಂಧು ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರಜಾ ಸೇವೆ ಆಂದೋಲನ”ದ ಅಂಗವಾಗಿ ಇದೇ ಶನಿವಾರ (ಸೆ.26) ಜಂಗಮಕೋಟೆ ಹೋಬಳಿ ಹೊಸಪೇಟೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಅಹವಾಲುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

“ಕಳೆದ ಶನಿವಾರ ನಡೆದ ಕಾರ್ಯಕ್ರಮದಲ್ಲಿ 210 ಅರ್ಜಿಗಳು ಸ್ವೀಕೃತವಾಗಿವೆ. ಕಸಬಾ ಹೋಬಳಿಯ ವೈ.ಹುಣಸೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 169 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಉಳಿದವು ವಿವಿಧ ಇಲಾಖೆಗಳದ್ದಾಗಿವೆ. ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.

“ಫಾರಂ 50, 53 ಮತ್ತು 57ಕ್ಕೆ ಸಂಬಂಧಿಸಿದ ಅರ್ಜಿಗಳು, ಸಾಗುವಳಿ ಚೀಟಿ, ಖಾತೆ, ಹಕ್ಕುಪತ್ರ, ಪಹಣಿ ಹಾಗೂ ಆರ್.ಆರ್.ಟಿ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ. ವಿಲೇವಾರಿ ಮಾಡಲು ಸಾಧ್ಯವಿರುವ ಅರ್ಜಿಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಜಮೀನು ಮಂಜೂರಾತಿ ಸೇರಿದಂತೆ ಕೆಲವು ಪ್ರಕರಣಗಳಿಗೆ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ” ಎಂದು ಹೇಳಿದರು.

ದಾರಿ ಹಾಗೂ ಒತ್ತುವರಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲನೆಗಾಗಿ ಕಂದಾಯ ನಿರೀಕ್ಷಕರಿಗೆ ಕಳುಹಿಸಲಾಗಿದ್ದು, ಸ್ಥಳ ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳಲಾಗುವುದು. ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳಿಗೂ ನಿಯಮಾನುಸಾರ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.

“ಪ್ರಜಾ ಸೇವೆ ಆಂದೋಲನದಲ್ಲಿ ದೂರು (ಗ್ರೀವಿಯನ್ಸ್) ಮತ್ತು ಹೊಸ ಮನವಿ (ರಿಕ್ವೆಸ್ಟ್) ಎಂಬ ಎರಡು ರೀತಿಯ ಅರ್ಜಿಗಳು ಬರುತ್ತವೆ. ಈಗಾಗಲೇ ಅರ್ಜಿ ಸಲ್ಲಿಸಿದ್ದರೂ ಪಹಣಿಯಲ್ಲಿ ದಾಖಲಾತಿ ಆಗದಿರುವುದು, ಸಾಗುವಳಿ ಚೀಟಿ ನೀಡಿದ್ದರೂ ಖಾತೆ ಆಗದಿರುವಂತಹ ಸಮಸ್ಯೆಗಳನ್ನು ಗ್ರೀವಿಯನ್ಸ್ ಎಂದು ಪರಿಗಣಿಸಲಾಗುತ್ತದೆ. ಹೊಸದಾಗಿ ಸಲ್ಲಿಸುವ ಅರ್ಜಿಗಳು ರಿಕ್ವೆಸ್ಟ್ ವ್ಯಾಪ್ತಿಗೆ ಬರುತ್ತವೆ” ಎಂದರು.

“ಐ.ಪಿ.ಜಿ.ಆರ್.ಎಸ್ (IPGRS) ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಏಳು ದಿನಗಳೊಳಗೆ ವಿಲೇವಾರಿ ಮಾಡಿ ಸಹಾಯಕ ಆಯುಕ್ತರ ಲಾಗಿನ್‌ಗೆ ಕಳುಹಿಸಬೇಕು. ಸರ್ಕಾರದ ಆದೇಶದಂತೆ ಅರ್ಜಿಗಳನ್ನು 21 ದಿನಗಳೊಳಗೆ ಇತ್ಯರ್ಥಪಡಿಸಬೇಕು. ನಿಗದಿತ ಅವಧಿಯಲ್ಲಿ ವಿಲೇವಾರಿ ಸಾಧ್ಯವಾಗದಿದ್ದರೆ, ಸಂಬಂಧಿಸಿದ ಹಂತಕ್ಕೆ ವರ್ಗಾಯಿಸಿ ಮುಂದಿನ ಕ್ರಮದ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗುವುದು” ಎಂದು ಹೇಳಿದರು.

ಪ್ರಜಾಸೇವಾ ಆಂದೋಲನ ಪ್ರಾರಂಭವಾದ ದಿನದ ಬಗ್ಗೆ ಅರ್ಜಿ ಸ್ವೀಕೃತಿ ನೀಡದ ಸಿಬ್ಬಂದಿಗೆ ಪ್ರಜಾಸೇವಾ ಆಂದೋಲನದಲ್ಲಿ ಜಿಲ್ಲಾಧಿಕಾರಿ ತರಾಟೆ ಎಂಬ ವರದಿಯನ್ನೂ ಓದಿ.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!