Sidlaghatta : ರೈತರ ಪಂಪ್ ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಸುವುದು ಸೇರಿದಂತೆ ತಾಲ್ಲೂಕಿನಾದ್ಯಂತ ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ಉಂಟಾಗುತ್ತಿರುವ ರೈತರ ಬೆಳೆ ನಷ್ಟವನ್ನು ಇಲಾಖೆಯಿಂದ ಭರಿಸಬೇಕು ಎಂದು ಕಸ್ತೂರಿ ಕನ್ನಡ ಸಂಘಟನೆಯ ಮುಖಂಡ ರಾಮಾಂಜಿ ಒತ್ತಾಯಿಸಿದರು.
ಅಸಮರ್ಪಕ ವಿದ್ಯುತ್ ನಿರ್ವಹಣೆಯ ವಿರುದ್ದ ನಗರದ ಬೆಸ್ಕಾಂ ಕಚೇರಿಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಚಿಂತಾಮಣಿ ವಿಭಾಗ ಕಾರ್ಯ ನಿರ್ವಹಣಾಧಿಕಾರಿ ಶುಭ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಬಹುತೇಕ ಜನರು ರೇಷ್ಮೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಬೆಸ್ಕಾಂ ಇಲಾಖೆಯ ಸಿಬ್ಬಂದಿ ಯಾವುದೇ ಮಾಹಿತಿ ನೀಡದೇ ವಿದ್ಯುತ್ ಸ್ಥಗಿತ ಮಾಡುತ್ತಿರುವುದರಿಂದ ಇಲ್ಲಿನ ರೈತರು ಸೇರಿದಂತೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಹಾಗಾಗಿ ಬೆಸ್ಕಾಂ ಇಲಾಖೆಯಿಂದ ಹಗಲಿನಲ್ಲಿ 4 ಗಂಟೆ ಹಾಗು ರಾತ್ರಿಯಲ್ಲಿ 3 ಗಂಟೆ ಒಟ್ಟು 7 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಬೇಕು. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸಂಜೆಯ ವೇಳೆ ವಿದ್ಯುತ್ ತೆಗೆಯಬಾರದು.
ಈಗಾಗಲೇ ಅಕ್ರಮ ಸಕ್ರಮ ಯೋಜನೆಯಡಿ ರೈತರಿಂದ ಹಣ ಕಟ್ಟಿಸಿಕೊಂಡು ವರ್ಷವಾದರೂ ರೈತರಿಗೆ ಅಕ್ರಮ ಸಕ್ರಮ ಮಾಡಿಕೊಟ್ಟಿಲ್ಲ, ಕೂಡಲೇ ಇದರ ಬಗ್ಗೆ ಕ್ರಮ ಜರುಗಿಸಬೇಕು. ರೈತರ ಜಮೀನಿನಲ್ಲಿ ವಿದ್ಯುತ್ ಕಂಬ ಅಥವ ಲೈನು ಎಳೆಯುವ ಮುನ್ನ ರೈತರ ಅನುಮತಿ ಪಡೆಯಬೇಕು. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರ ಬೆಳೆ ಹಾಳಾದಲ್ಲಿ ಬೆಸ್ಕಾಂ ಇಲಾಖೆಯಿಂದಲೇ ರೈತರಿಗೆ ಪರಿಹಾರ ನೀಡಬೇಕು. ಈ ಬಗ್ಗೆ ಇಲಾಖೆ ಕ್ರಮ ಜರುಗಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿಯನ್ನು ಚಿಂತಾಮಣಿ ವಿಭಾಗ ಕಾರ್ಯ ನಿರ್ವಹಣಾಧಿಕಾರಿ ಶುಭ ರವರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಚಿಂತಾಮಣಿ ವಿಭಾಗ ಕಾರ್ಯ ನಿರ್ವಹಣಾಧಿಕಾರಿ ಶುಭ ಮಾತನಾಡಿ, ನಮಗಿರುವ ಬೇಡಿಕೆಯಷ್ಟು ವಿದ್ಯುತ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ನಮಗೆ ಲಭ್ಯವಿರುವ ವಿದ್ಯುತ್ ನ್ನು ರೊಟೇಷನ್ ಪದ್ದತಿಯಲ್ಲಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಇನ್ನುಳಿದ ಬೇಡಿಕೆಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಚಿಂತಾಮಣಿ ವಿಭಾಗದ ಸಹಾಯಕ ಕಾರ್ಯ ನಿರ್ವಹಣಾ ಇಂಜಿನಿಯರ್ ಸೂರ್ಯಪ್ರಕಾಶ್, ಸಹಾಯಕ ಕಾರ್ಯನಿರ್ವಾಹಕರಾದ ಪ್ರಭು, ಶಿವಪ್ರಸಾದ್ ಬಾಬು, ಸಹಾಯಕ ಲೆಕ್ಕಾಧಿಕಾರಿಗಳಾದ ಮಂಜುನಾಥ್, ವೀರಭದ್ರಚಾರಿ, ರೈತ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಕೆ.ಮುನಿರಾಜ, ವಿ.ಮುನಿಯಪ್ಪ, ನಾರಾಯನಸ್ವಾಮಿ, ಮಾರಪ್ಪ, ಮೌಲಾ, ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.