Mallur, Sidlaghatta : ತೇಜಸ್ವಿಯವರ ಪ್ರತಿಯೊಂದು ಕೃತಿ ಸಹ ಓದುಗರನ್ನು ರೋಚಕ ಅನುಭವಕ್ಕೆ ಕೊಂಡೊಯ್ಯುವಷ್ಟು ಅವರ ಬರಹ ಪ್ರಭಾವಶಾಲಿಯಾಗಿದೆ ಎಂದು ತೋಟಗಾರಿಕಾ ತಜ್ಞ ಸಂತೆ ನಾರಾಯಣಸ್ವಾಮಿ ತಿಳಿಸಿದರು.
ಮಳ್ಳೂರು ಗ್ರಾಮ ಪಂಚಾಯಿತಿಯ ಅಂಗತಟ್ಟಿ ಬಡಾವಣೆಯ ಎಸ್.ಎನ್. ಫಾರಂ ನಲ್ಲಿ ಭಾನುವಾರ ಅರಿವು ಸಾಂಸ್ಕೃತಿಕ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಬನ್ನಿ ತೇಜಸ್ವಿ ಜೊತೆ ಮಾತನಾಡೋಣ” ಕಾರ್ಯಕ್ರಮದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೃತಿಯ ಕುರಿತು ಅವರು ಮಾತನಾಡಿದರು.
ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದ ಇವರು, ತಮ್ಮ ಆದರ್ಶಗಳಿಗೆ ಬದ್ಧರಾಗಿ ಬದುಕಿದವರು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಕತೆಗಾರ, ಕಾದಂಬರಿಕಾರ, ಅಂಕಣಕಾರ, ಕೃಷಿಕ ಮತ್ತು ವಿಶಿಷ್ಟ ಚಿಂತಕ ಎಂದು ಬಣ್ಣಿಸಿದರು.
ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದಿರುವ ನಾಗದಾಸನಹಳ್ಳಿ ಎನ್.ಸಿ. ಪಟೇಲರು ಮಾತನಾಡಿ, ತೇಜಸ್ವಿ ಅವರು ರೈತರ, ಶ್ರಮಿಕರ, ಕೆಳವರ್ಗದವರ ಬದುಕಿನ ಚಿತ್ರಣವನ್ನು ತಮ್ಮ ಬರಹದಲ್ಲಿ ಕಟ್ಟಿ ಕೊಟ್ಟವರು. ಸ್ವತಃ ರೈತರಾಗಿದ್ದ ಅವರು ಸಮಾಜವಾದಿ ಚಿಂತನೆಗಳನ್ನು ಬೆಳೆಸಿಕೊಂಡಿದ್ದರು, ರಾಮ ಮನೋಹರ್ ಲೋಹಿಯಾ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿ, ತೇಜಸ್ವಿ ಅವರ ಕೃತಿ “ಮಹಾ ಪಲಾಯನ “ದ ಪ್ರಥಮ ಅಧ್ಯಾಯ ಓದಿ, ತೇಜಸ್ವಿಯವರ ಕೃತಿಯು ಬೇರೆ ಭಾಷೆಯ ಅನುವಾದ ಅನ್ನಿಸದು, ಕನ್ನಡದ ಸ್ವತಂತ್ರ ಕೃತಿ ಎನ್ನುವ ಹಾಗೆ ಅವರು ಅನುವಾದಿಸಿದ್ದಾರೆ. ಎಂದು ಹೇಳಿದರು.
ಲೇಖಕ ಸಂಪತ್ ಕುಮಾರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿರುವ ನಮಗೆ “ಮಹಾ ಪಲಾಯನ” ಕೃತಿ ರೋಚಕ ಮತ್ತು ಭಯ ಹುಟ್ಟಿಸುವ ಹಾಗಿದೆ ಎಂದರು. ನಿವೃತ್ತ ಅಧಿಕಾರಿ, ಕವಿ ನರಸಿಂಹರೆಡ್ಡಿ ಮಾತನಾಡಿ, ಮನುಷ್ಯನ ಮನ ಸ್ವತಂತ್ರಕ್ಕಾಗಿ ಮಿಡಿಯುವಾಗ ಬಂಧನದಿಂದ ಬಿಡುಗಡೆಗೆ ಮಹಾ ಹೋರಾಟ ಮಾಡುವ ಪ್ರಯತ್ನ ಮತ್ತು ಅಲ್ಲಿ ಎದುರಾಗುವ ಕ್ಲಿಷ್ಟ ಸನ್ನಿವೇಶವನ್ನು ನಮ್ಮ ಕಣ್ಣ ಮುಂದೆ ಚಿತ್ರ ಮೂಡುವ ಹಾಗೆ ತೇಜಸ್ವಿಯವರು ಬರೆದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಉಪನ್ಯಾಸಕ ಸುಂಡ್ರಹಳ್ಳಿ ಶ್ರೀನಿವಾಸ, ಯುವ ಸಾಹಿತಿ ನಂದನ ಗೌಡ, ವಕೀಲ ಜಯರಾಮ್, ಶಿಕ್ಷಕ ಶಿವಕುಮಾರ್, ರೈತ ಮುನಿರಾಜು, ಚನ್ನರಾಯಪಟ್ಟಣ ವೆಂಕಟರಮಣ ಹಾಜರಿದ್ದರು.