Sidlaghatta : ರೈತರು ಕೃಷಿ ಉದ್ದೇಶಕ್ಕಾಗಿ ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಪೂರ್ತಿ ಸಾಲದ ಹಣವನ್ನು ಮರುಪಾವತಿಸಿ, ಬಡ್ಡಿ ಮನ್ನಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಬಿ.ಎನ್.ರವಿಕುಮಾರ್ ಅವರು ರೈತರಲ್ಲಿ ಮನವಿ ಮಾಡಿದರು.
ನಗರದಲ್ಲಿನ ಪಿ.ಎಲ್.ಡಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ನಿಂದ ರೈತರಿಗೆ ನೀಡಿದ ಸಾಲದ ಚೆಕ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಕಳೆದ ಬೆಳಗಾವಿಯಲ್ಲಿ ನಡೆದ ಸದನದಲ್ಲಿ ಮುಖ್ಯಮಂತ್ರಿಗಳು ರೈತರು ಸಂಪೂರ್ಣ ಸಾಲವನ್ನು ಮರುಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದು ರೈತರು ಸಾಲದ ಪೂರ್ಣ ಹಣವನ್ನು ವಾಪಸ್ ಮಾಡಿ ಬಡ್ಡಿ ಮನ್ನಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕೋರಿದರು.
ರೈತರ ಪರವಾಗಿ ಕಾಳಜಿವುಳ್ಳ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಲ್ಲೂಕಿನ ರೈತರ ಪರವಾಗಿ ಅಭಿನಂದನೆಗಳನ್ನು ಅವರು ತಿಳಿಸಿದರು.
ರೈತರು ಅಥವಾ ಯಾರೇ ಆಗಲಿ ಬ್ಯಾಂಕ್ ನಿಂದ ಪಡೆದ ಸಾಲವನ್ನು ಉದ್ದೇಶಿತ ಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಬೇಕು ಮತ್ತು ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡು ಸಕಾಲಕ್ಕೆ ಸಾಲದ ಹಣವನ್ನು ವಾಪಸ್ ಮಾಡಬೇಕೆಂದು ಅವರು ರೈತರಲ್ಲಿ ಮನವಿ ಮಾಡಿದರು.
ರೈತರಲ್ಲಿ ಆರ್ಥಿಕ ಶಿಸ್ತಿನ ಕೊರತೆ ಇದೆ. ಜತೆಗೆ ಬರಗಾಲವು ಆಗೊಮ್ಮೆ ಈಗೊಮ್ಮೆ ಎದುರಾಗುತ್ತಿದೆ. ಬೆಲೆ ಇಳಿಕೆಯಂತ ಹತ್ತು ಹಲವು ಸಮಸ್ಯೆಗಳು ರೈತರನ್ನು ಕಾಡುತ್ತಿದ್ದು ಅದೆಲ್ಲವನ್ನೂ ಎದುರಿಸುವ ಶಕ್ತಿ ರೈತರಲ್ಲಿ ಬರಬೇಕಿದ್ದು ಅದಕ್ಕಾಗಿ ರೈತರೊಂದಿಗೆ ಸರ್ಕಾರ ಇದೆ ಎಂದು ಧೈರ್ಯ ತುಂಬಿದರು.
ಕಳೆದ ತಿಂಗಳು 2.4 ಕೋಟಿ ರೂ.ಗಳ ಸಾಲವನ್ನು 60 ಮಂದಿ ರೈತರಿಗೆ ನೀಡಿದ್ದು ಇದೀಗ 14 ರೈತರಿಗೆ 33 ಲಕ್ಷ ರೂ.ಗಳ ಕೃಷಿ ಸಾಲವನ್ನು ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಡಿ.ಸಿ.ರಾಮಚಂದ್ರ ಮಾತನಾಡಿ, ರೈತರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕ್ ನ್ನು ಆರ್ಥಿಕವಾಗಿ ಸದೃಢವಾಗಿಸುವ ಕೆಲಸ ಆಗಬೇಕು. ಆಗ ಮಾತ್ರ ಬ್ಯಾಂಕಿನಿಂದ ಇನ್ನೂ ಹೆಚ್ಚಿನ ರೈತರಿಗೆ ಸಾಲದ ಸೌಲಭ್ಯ ಸಿಗುವಂತಾಗುತ್ತದೆ ಎಂದರು.
ಸಾಲ ಮರುಪಾವತಿ ಪ್ರಮಾಣ ಕುಸಿದ ಕಾರಣ ನಮ್ಮ ಬ್ಯಾಂಕಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗುತ್ತಿಲ್ಲ. ಬ್ಯಾಂಕಿನ ಆಡಳಿತ ಮಂಡಳಿ, ಶಾಸಕರು ಸೇರಿ ಬ್ಯಾಂಕನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು, ಮುಖ್ಯವಾಗಿ ರೈತರ ಸಹಕಾರದಿಂದ ಮಾತ್ರ ಇದೆಲ್ಲವೂ ಸಾಧ್ಯವಾಗಲಿದೆ ಎಂದರು.
ಶೇ 3 ಬಡ್ಡಿ ಧರದಲ್ಲಿ 14 ಮಂದಿ ರೈತರಿಗೆ 33 ಲಕ್ಷ ರೂ.ಸಾಲ ವಿತರಿಸಲಾಯಿತು. ನಿರ್ದೇಶಕರಾದ ಬಂಕ್ ಮುನಿಯಪ್ಪ, ಸುರೇಶ್, ವ್ಯವಸ್ಥಾಪಕ ಸಿ.ಎನ್.ಕೃಷ್ಣನ್ ಹಾಜರಿದ್ದರು.