ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟದ (ಸಿಕ್ರಂ) ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟದ (ಸಿಕ್ರಂ) ಜಿಲ್ಲಾ ಸಂಚಾಲಕ ಎಸ್.ಎಂ.ಮಾಥ್ಯೂ ಮುನಿಯಪ್ಪ ಮಾತನಾಡಿದರು.
ಇಂದು ಮಹಿಳೆ ಅತ್ಯಂತ ಸದೃಢವಾಗಿ, ಸಮರ್ಥವಾಗಿ, ಪುರುಷನಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಅವಳ ಸೇವೆ ಗಣನೀಯ. ಒಂದು ದೇಶ ಅತ್ಯಂತ ಶಿಸ್ತುಬದ್ಧವಾಗಿ, ಒಂದು ವ್ಯವಸ್ಥಿತ ಚೌಕಟ್ಟಿನಲ್ಲಿ ನಡೆಯಲು ಆ ದೇಶದ ಸಂವಿಧಾನ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಹಾಗೆಯೇ ಒಂದು ಕುಟುಂಬ, ಒಂದು ಸಂಸಾರ ಶಿಸ್ತಿನಿಂದ, ವ್ಯವಸ್ಥಿತವಾಗಿ ಸಾಗಲು ಮಹಿಳೆಯ ಪಾತ್ರ ತುಂಬಾ ಮುಖ್ಯವಾಗುತ್ತದೆ. ಹೆಣ್ಣು ಸಹನೆಯ ಸಾಕಾರ ಮೂರ್ತಿ. ಹಾಗಾಗಿ ಒಂದು ಕುಟುಂಬದ ಸಮತೋಲನ ಕಾಪಾಡುವ ಶಕ್ತಿ, ಚತುರತೆ ಆಕೆಗಿದೆ. ಎಲ್ಲ ಕ್ಷೇತ್ರಗಳಲ್ಲೂ ಆಕೆ ನಿಪುಣೆ, ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ ಎಂದ ಮೇಲೆ ಎಲ್ಲವನ್ನೂ ನಿಭಾಯಿಸಬಲ್ಲ ಜಾಣೆ ಈ ಮಹಿಳೆ ಎಂದು ಅವರು ತಿಳಿಸಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣದ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ಸಾರಿ ಹೇಳಿದವರು ನಾವು. ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಹೆಣ್ಣು ಮಗುವಿನತ್ತ ಸಮಾಜ ದೃಷ್ಟಿಕೋನ ಬದಲಿಸುವ ಸಲುವಾಗಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಆಚರಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 200 ಹೆರಿಗೆಯನ್ನು ಮಾಡಿರುವ ಸೂಲಗಿತ್ತಿ ಚಿಕ್ಕವೆಂಕಟಮ್ಮ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರ, ವಕೀಲ ಶ್ರೀನಿವಾಸ್, ಮೇಲ್ವಿಚಾರಕಿ ಶಾಂತಾ ಜಿದ್ರಾಳೆ, ಮುಖ್ಯ ಶಿಕ್ಷಕ ಮುನಿನಾರಾಯಣಪ್ಪ, ಮಹಿಳಾ ಸಂಘದ ಪ್ರತಿನಿಧಿಗಳಾದ ಭಾಗ್ಯಮ್ಮ, ಸುಜಾತ, ಮಂಜುಳ ಹಾಜರಿದ್ದರು.